×
Ad

ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಡಿಕೆಶಿ ಮನವಿ

Update: 2019-08-12 15:57 IST

ಕುಂದಗೋಳ,ಆ. ೧೨:ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿರುವ ಹಾಗೆ ರಾಜ್ಯದಲ್ಲಿನ ಪ್ರವಾಹದಿಂದ 30 ರಿಂದ 40 ಸಾವಿರ ಕೋಟಿ ನಷ್ಟ ಉಂಟಾಗಿದೆ. ಹೀಗಾಗಿ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಮನವಿ ಮಾಡಿದರು.

ಸೋಮವಾರ ಹುಬ್ಬಳ್ಳಿಗೆ ಆಗಮಿಸಿ ಕುಂದಗೋಳ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಅಧ್ಯಯನ ಮಾಡಿದ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು...

‘ಪ್ರಕೃತಿ ನಿಯಮ ನಮ್ಮ ಕೈಯಲ್ಲಿಲ್ಲ. ಪಕ್ಕದ ರಾಜ್ಯಗಳಲ್ಲಿ ಸುರಿದ ಭಾರಿ ಮಳೆ ನಮ್ಮ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಂದಿದೆ. ಕೃಷ್ಣೆಯಿಂದ ಹಿಡಿದು, ತುಂಗ ಭದ್ರಾ, ಕಾವೇರಿ ವರೆಗೂ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ಉತ್ತರ ಕರ್ನಾಟಕದ ಜಿಲ್ಲೆಗಳ ಜತೆಗೆ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳು ಸಹ ಪ್ರವಾಹಕ್ಕೆ ಸಿಲುಕಿವೆ.

ಕುಂದಗೋಳದಲ್ಲೇ ಸುಮಾರು ಮೂರು ಸಾವಿರ ಮನೆಗಳು ಕುಸಿದಿವೆ. ಕೆಲವು ಕಡೆ ನಾನೇ ಹೋಗಿ ಭೇಟಿ ನೀಡಿದ್ದೇನೆ. 20ರಿಂದ 30 ಅಡಿಯಷ್ಟು ಆಳ ಹರಿಯುತ್ತಿದ್ದ ಹೊಳೆಗಳು ಅರ್ಧ ಕಿ.ಮೀ ನಷ್ಟು ಹರಿದಿದೆ. ಸುತ್ತಮುತ್ತರ ಬೆಳೆ ಪ್ರದೇಶಗಳು ನಾಶವಾಗಿದೆ. ಅನೇಕರು ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಇನ್ನು ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ರಸ್ತೆಗಳು ಹಾಳಾಗಿ ಸಂಪರ್ಕ ಕಡಿತವಾಗಿರುವುದು ಕಂಡು ಬಂದಿದೆ. ಸದ್ಯಕ್ಕೆ ಸಂತೋಷಡ ವಿಚಾರ ಎಂದರೆ ಪ್ರಾರಂಭಿಕವಾಗಿ ಚೆಕ್ ನೀಡಲಾಗುತ್ತಿದ್ದು, ಪರಿಹಾರದ ಮೊತ್ತವನ್ನು ನಂತರ ಲೆಕ್ಕ ಹಾಕಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದ್ದು ಕೂಡಲೇ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಒಂದೇ ಪಕ್ಷ ಆಡಳಿತದಲ್ಲಿದ್ದು ಆದಷ್ಟು ಬೇಗ ಪರಿಹಾರ ಘೋಷಣೆ ಮಾಡಿ ಜನರ ನೆರವಿಗೆ ಧಾವಿಸಬೇಕು ಎಂದು ಪಕ್ಷದ ಪರವಾಗಿ ಹಾಗೂ ಶಾಸಕರ ಪರವಾಗಿ ಮುಖ್ಯಮಂತ್ರಿಗಳಲ್ಲಿ ನಾನು ನಮ್ರತೆಯಿಂದ ಮನವಿ ಮಾಡಿಕೊಲ್ಳುತ್ತೇನೆ. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ವಿರೋಧ ಪಕ್ಷಗಳು ನೀಡಲಿವೆ.

ಕುಂದಗೋಳದಲ್ಲಿ ಶಾಸಕರ ಕಚೇರಿ ಪ್ರಾರಂಭಿಸಲು ಎಲ್ಲ ತಯಾರಿ ನಡೆಯುತ್ತಿದೆ. ಇಷ್ಟುದಿನ ಕಚೇರಿ ಹುಬ್ಬಳ್ಳಿಯಲ್ಲಿತ್ತು. ಶೀಘ್ರ ಕುಂದಗೋಳದಲ್ಲಿ ಸಿದ್ಧವಾಗಲಿದೆ. ತಿಂಗಳೊಳಗೆ ಕಚೇರಿ ಆರಂಭವಾಗಲು ವ್ಯವಸ್ಥೆ ಮಾಡುತ್ತೇನೆ.  ಈಗ ನಮ್ಮ ಸರ್ಕಾರ ಇಲ್ಲದೇ ಹೋದರೂ ನಾನು ಈ ಹಿಂದೆ ನೀಡಿದ ಮಾತಿಗೆ ಬದ್ಧನಾಗಿ ಇರುವ ಸರ್ಕಾರದ ಮೇಲೆ ಒತ್ತಡ ತಂದು ಏನು ಅಭಿವೃದ್ಧಿ ಕಾರ್ಯಗಳಾಗಬೇಕೋ ಅದನ್ನು ಮಾಡಿಸುವ ಪ್ರಯತ್ನ ಮಾಡುತ್ತೇನೆ.’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News