ಐಪಿಎಸ್ ಅಧಿಕಾರಿಗಳ ಪೋನ್ ಕದ್ದಾಲಿಕೆ ಆರೋಪ ಪ್ರಕರಣ: ಶೀಘ್ರದಲ್ಲಿಯೇ ವರದಿ ಸಲ್ಲಿಕೆ?

Update: 2019-08-12 12:12 GMT

ಬೆಂಗಳೂರು, ಆ.12: ಬೆಂಗಳೂರು ಪೊಲೀಸ್‌ ಆಯುಕ್ತರ ಹುದ್ದೆಗೆ ಲಾಬಿ ಮಾಡಿದ್ದ ಐಪಿಎಸ್‌ ಅಧಿಕಾರಿಗಳ ಫೋನ್‌ ಕದ್ದಾಲಿಕೆ ಆರೋಪ ಪ್ರಕರಣದ ತನಿಖೆ ಬಹುತೇಕ ಮುಕ್ತಾಯವಾಗಿದ್ದು, ಶೀಘ್ರದಲ್ಲಿಯೇ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ಎನ್‌. ರಾಜು ಅವರಿಗೆ ವರದಿ ಸಲ್ಲಿಕೆಯಾಗಲಿದೆ ಎಂದು ತಿಳಿದುಬಂದಿದೆ.

ಸಿಸಿಬಿಯಲ್ಲಿರುವ ತಾಂತ್ರಿಕ ವಿಭಾಗದಲ್ಲಿ ಒಂದೇ ಬಾರಿ 200ಕ್ಕೂ ಹೆಚ್ಚು ಮಂದಿಯ ಫೋನನ್ನು ಕದ್ದಾಲಿಸುವ ವ್ಯವಸ್ಥೆ ಇದೆ. ಈ ರೀತಿ, ಹಲವು ದಿನಗಳಿಂದ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಕ್ಷೇತ್ರದ ವ್ಯಕ್ತಿಗಳ ಫೋನ್‌ ಕದ್ದಾಲಿಸಲಾಗಿದೆ ಎನ್ನಲಾಗುತ್ತಿದ್ದು, ಇದರಲ್ಲಿ ಕಾನೂನುಬಾಹಿರ ಎಷ್ಟು ಮಂದಿ ಇದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಏನಿದು ಪ್ರಕರಣ?

ಐಪಿಎಸ್‌ ಅಧಿಕಾರಿ ಭಾಸ್ಕರ ರಾವ್‌ ಅವರು ಕೆಎಸ್‌ಆರ್‌ಪಿ ಎಡಿಜಿಪಿ ಆಗಿದ್ದಾಗ ರಾಜ್ಯಸಭೆಯ ಸದಸ್ಯ ಅಹಮದ್‌ ಪಟೇಲ್‌ ಅವರ ಆಪ್ತ ಫರಾಜ್‌ ಎಂಬುವರ ಜೊತೆ ಅವರು ನಡೆಸಿದ್ದಾರೆ ಎನ್ನಲಾದ ಮಾತುಕತೆಗಳ ಆಡಿಯೊ ಇತ್ತು ಎನ್ನಲಾಗಿದೆ. ಅದನ್ನು  ಭಾಸ್ಕರ್ ರಾವ್‌ ಅವರು  ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮರುದಿನ ಸಾಮಾಜಿಕ ಜಾಲತಾಣಗಳಲ್ಲಿ ಬಯಲುಗೊಳಿಸಲಾಗಿತ್ತು.

ಈ ಸಂಬಂಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್‌ ಪಾಟೀಲ ನೇತೃತ್ವದ ತಂಡ,  ಆಡಿಯೊ ಧ್ವನಿಸುರಳಿ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನೂ, ಈ ಕದ್ದಾಲಿಕೆ ಕಾನೂನುಬಾಹಿರವಾಗಿ ನಡೆದಿದೆ ಎನ್ನಲಾಗಿದ್ದು, ಇದರ ಹಿಂದೆಯೇ ಕಳೆದೆರಡು ತಿಂಗಳಲ್ಲಿ ಕಾನೂನು ಬಾಹಿರವಾಗಿಯೇ ಹಲವು ರಾಜಕಾರಣಿಗಳ, ಅಧಿಕಾರಿಗಳ ಕದ್ದಾಲಿಕೆ ನಡೆದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News