ಕೊಡಗು ಪ್ರವಾಹ ಪರಿಹಾರ ಸಭೆ : ಮಳೆಹಾನಿ ಸಂಕಷ್ಟದಲ್ಲಿ 1,900 ಕುಟುಂಬಗಳು

Update: 2019-08-13 11:50 GMT

ಮಡಿಕೇರಿ,ಆ.13: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಕೊಡಗು ಪ್ರಕೃತಿ ವಿಕೋಪ ನಿರ್ವಹಣೆ ಮೇಲುಸ್ತುವಾರಿ ಅಧಿಕಾರಿಗಳಾದ ರಾಜ್‍ಕುಮಾರ್ ಖತ್ರಿ ಅವರು ಜಿಲ್ಲೆಗೆ ಸೋಮವಾರ ಭೇಟಿ ನೀಡಿ ಮಳೆಹಾನಿಯಿಂದ ಉಂಟಾದ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. 

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಳೆಹಾನಿಯಿಂದ ಆಗಿರುವ ಹಾನಿ, ಜನರ ರಕ್ಷಣೆ ಹಾಗೂ ಪರಿಹಾರ ಕೇಂದ್ರಗಳ ಮಾಹಿತಿ ನೀಡಿದರು. ಮಳೆಹಾನಿಯಿಂದಾಗಿ ಜಿಲ್ಲೆಯಲ್ಲಿ 7 ಜನರು ಸಾವನಪ್ಪಿದ್ದು, 8 ಜನರು ಕಣ್ಮರೆಯಾಗಿದ್ದಾರೆ. ಪರಿಹಾರ ಕಾರ್ಯಗಳು ಸಮೋರೋಪಾದಿಯಲ್ಲಿ ನಡೆಯುತ್ತಿರುವುದಾಗಿ ಅವರು ಮಾಹಿತಿ ನೀಡಿದರು.  

 ಅಂದಾಜು 1,900 ಕುಟುಂಬಗಳು ಮಳೆಹಾನಿಯಿಂದ ತೊಂದರೆಗೊಳಗಾಗಿದ್ದು, ವಿರಾಜಪೇಟೆ ತಾಲೂಕಿನಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು ಈ ಸಂಬಂಧ ತೆಗೆದುಕೊಂಡಿರುವ ತುರ್ತು ಕಾರ್ಯಗಳು ಹಾಗೂ ಪರಿಹಾರ ಕಾರ್ಯಗಳ ಮಾಹಿತಿಯನ್ನು ಜಿಲ್ಲಾಧಿಕಾರಿಯವರು ನೀಡಿದರು. 

ಪ್ರೋಬೋಷನರಿ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳನ್ನು ಪರಿಹಾರ ಕಾರ್ಯಗಳಲ್ಲಿ ನಿಯೋಜಿಸಿಕೊಂಡಿರುವ ಬಗ್ಗೆ ವಿವರಣೆ ನೀಡಿದರು. ಜಿಲ್ಲೆಯಲ್ಲಿ ಮಳೆಹಾನಿಯಿಂದ ಎಲ್ಲಾ ರೀತಿಯಲ್ಲು ಹೆಚ್ಚು ಹಾನಿ ಸಂಭವಿಸಿರುವುದಾಗಿ ಈ ಸಂಬಂಧ ನಷ್ಟದ ಅಂದಾಜು ಪಟ್ಟಿ ನೀಡುತ್ತಿರುವ ಬಗ್ಗೆ ಅಪರ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ ಅವರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದರು.

ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಮಾತನಾಡಿ ಪರಿಹಾರ ಕೇಂದ್ರಗಳ ನಿರ್ವಾಹಣೆಗೆ ಅಗತ್ಯ ದಾಸ್ತನುಗಳಿದ್ದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ 24 ಗಂಟೆಗಳ ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಪರಿಹಾರ ಕೇಂದ್ರಗಳಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು ಆರೋಗ್ಯಕ್ಕೆ ಸಂಬಂಧಿಸಿದ ತರಬೇತಿ ನೀಡಲಾಗುತ್ತಿದೆ ಎಂದು ಅಪಾರ ಮುಖ್ಯ ಕಾರ್ಯದರ್ಶಿ ಅವರಿಗೆ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ ಅವರು ರಕ್ಷಣಾ ಕಾರ್ಯಗಳು ಹಾಗೂ ಕಾಣೆಯಾದವರ ಶೋಧ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.

ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಕೊಡಗು ಪ್ರಕೃತಿ ವಿಕೋಪ ನಿರ್ವಹಣೆ ಮೇಲುಸ್ತುವಾರಿ ಅಧಿಕಾರಿಯಾದ ರಾಜ್ ಕುಮಾರ್ ಖತ್ರಿ ಅವರು ತುರ್ತಾಗಿ ಆಗಬೇಕಾದ ಕೆಲಸಗಳ ಹಾಗೂ ಮುಂದೆ ಮಾಡಬೇಕಾದ ಪರಿಹಾರ ಕೆಲಸಗಳ ಕುರಿತು ಮಾರ್ಗದರ್ಶನ ನೀಡಿ ಸರ್ಕಾರವು ಸಂತ್ರಸ್ತ ಕುಟುಂಬಗಳಿಗೆ ಆಸ್ತಿ, ಮನೆ, ಬೆಳೆ ಕಳೆದುಕೊಂಡ ಜನರಿಗೆ ಅಗತ್ಯ ನೆರವು ನೀಡಲಿದ್ದು ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿಬೇಕು ಎಂದು ಅವರು ತಿಳಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News