ಮಡಿಕೇರಿ: ಮಳೆಹಾನಿ ಅಂದಾಜು ಪಟ್ಟಿ ತುರ್ತಾಗಿ ನೀಡಲು ಜಿಲ್ಲಾಧಿಕಾರಿ ಸೂಚನೆ

Update: 2019-08-13 11:53 GMT

ಮಡಿಕೇರಿ, ಆ.13:ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ನಷ್ಟದ ಮಾಹಿತಿಯ ಅಂದಾಜು ಪಟ್ಟಿಯನ್ನು ತುರ್ತಾಗಿ ನೀಡುವಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಮಳೆಹಾನಿ ಸಂಬಂಧ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವ್ಯಾಪಕ ಮಳೆಯಿಂದಾಗಿ ಸಾವು, ನೋವು, ಕೃಷಿ ಭೂಮಿ, ಕಾಫಿ ಬೆಳೆ, ರಸ್ತೆ, ಸೇತುವೆ, ಮನೆಗಳು, ಜಾನುವಾರುಗಳ ಜೀವಹಾನಿ ಹೀಗೆ ವ್ಯಾಪಕ ಹಾನಿ ಉಂಟಾಗಿದ್ದು ಸರ್ಕಾರಕ್ಕೆ ನಷ್ಟದ ಪ್ರಾಥಮಿಕ ಅಂದಾಜು ಪಟ್ಟಿ ವರದಿ ನೀಡಬೇಕಿದ್ದು, ಅಧಿಕಾರಿಗಳು ಯಾವುದೇ ಲೋಪದೋಷಗಳು ಆಗದಂತೆ ನಿಯಾಮನುಸಾರ ಅಂದಾಜು ಪಟ್ಟಿಯನ್ನು ಸಿದ್ಧ್ದಪಡಿಸಿ ತುರ್ತಾಗಿ ನೀಡುವಂತೆ ನಿರ್ದೇಶನ ನೀಡಿದರು. 

ಜಿಲ್ಲೆಯ ವಿವಿದೆಡೆ ತೆರೆಯಲಾಗಿರುವ ಪರಿಹಾರ ಕೇಂದ್ರಗಳನ್ನು ಅಗತ್ಯ ಸೌಲಭ್ಯ ನೀಡಿದ್ದು, ಪ್ರಾಥಮಿಕ ಹಂತದಲ್ಲಿ 3,800 ಹಾಗೂ ಜೊತೆಗೆ ಪ್ರತಿ ವ್ಯಕ್ತಿಗೆ ದಿನಭತ್ಯೆಯನ್ನು ಮತ್ತು ಪಡಿತರ ಕಿಟ್ಟು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎನ್‍ಡಿಆರ್ ಎಫ್/ ಎಸ್‍ಡಿಆರ್ಅಫ್ ಅಡಿಯಲ್ಲಿ ಅಗತ್ಯ ಹಣವಿದ್ದು, ತುರ್ತು ಕೆಲಸಗಳಿಗೆ ಯಾವುದೇ ಕೊರತೆ ಆಗದಂತೆ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಾಹಣೆ ಮಾಡುವಂತೆ ಎಲ್ಲಾ ಜಿಲ್ಲಾ ಅಧಿಕಾರಿಗಳಿಗೆ ತಿಳಿಸಿದರು. ಎನ್‍ಡಿಆರ್ಎಫ್/ ಎಸ್‍ಡಿಆರ್ಎಫ್ ನಿಯಮಗಳ ಕುರಿತ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಲಾಯಿತು.    

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ, ಜಿ.ಪಂ ಸಿಇಒ ಲಕ್ಷ್ಮೀಪ್ರಿಯಾ, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಧಿಕಾರಿ ಟಿ ಜವರೇಗೌಡ, ಪ್ರೋಬೇಷನರಿ ಕೆ.ಎಎಸ್ ಅಧಿಕಾರಿಗಳು ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶಿಲ್ದಾರರು, ತಾಪಂ ಇಒಗಳು, ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News