ಚಿಕ್ಕಮಗಳೂರು: ಕ್ಷೀಣಿಸಿದ ಮಳೆ-ನೆರೆ, ಸಂತ್ರಸ್ಥರಿಗೆ ಗಂಜಿ ಕೇಂದ್ರಗಳಲ್ಲಿ ಆಸರೆ

Update: 2019-08-13 12:02 GMT

ಚಿಕ್ಕಮಗಳೂರು, ಆ.13: ಮಲೆನಾಡು ಭಾಗದಲ್ಲಿ ರವಿವಾರದಿಂದ ಮಳೆಯಾಗಿದ್ದು, ಗುಡ್ಡ ಕುಸಿದು ನಡುಗಡ್ಡೆಯಲ್ಲಿ ಸಿಲುಕಿದ ಎಲ್ಲ ಸಂತ್ರಸ್ಥರನ್ನು ಅರೆಸೇನಾ ಪಡೆಯ ಯೋಧರು, ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರನ್ನು ಜಿಲ್ಲೆಯ ಮಲೆನಾಡು ಭಾಗದ ತಾಲೂಕು ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ.

ಮೂಡಿಗೆರೆ ತಾಲೂಕಿನ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತದಿಂದಾಗಿ ಕಳೆದ ಆರು ದಿನಗಳಿಂದ 10 ಜನರು ಸಿಲುಕಿದ್ದರು. ಅವರನ್ನು ಯೋಧರು ತಂಡ ಸೋಮವಾರ ರಕ್ಷಣೆ ಮಾಡಿದೆ. ಅನಾರೋಗ್ಯದಿಂದ ಬಳಲುತಿದ್ದ ನಾಲ್ಕು ಜನರನ್ನು ಯೋಧರು 5 ಕಿ.ಮೀ. ಹೊತ್ತು ತಂದಿದ್ದಾರೆ. 50 ಕ್ಕೂ ಹೆಚ್ಚು ಜನರನ್ನು ಸೋಮವಾರ ರಕ್ಷಿಸಲಾಗಿದೆ. ಯೋಧರ ತಂಡಕ್ಕೆ ಸ್ಥಳೀಯ ಅಧಿಕಾರಿಗಳು ಹಾಗೂ ಸ್ಥಳೀಯರು ಸಹಕಾರ ನೀಡಿದರು. ಅಲೆಖಾನ್, ಮದುಗುಡಿ ಗ್ರಾಮಗಳಲ್ಲಿ ಸಿಲುಕಿದ್ದವರನ್ನೂ ರಕ್ಷಿಸಿ ಕರೆತರಲಾಯಿತು.

ಪ್ರವಾಹದಲ್ಲಿ ಮುಳುಗಿದ್ದ ಹೆಬ್ಬಾಳೆ ಸೇತುವೆಯಲ್ಲಿ ಸೋಮವಾರದಿಂದ ವಾಹನ ಸಂಚಾರ ಆರಂಭವಾಗಿದೆ. ಸೇತುವೆಯಲ್ಲಿ ಸಂಚಾರ ಸಾಧ್ಯವಿಲ್ಲದ ಕಾರಣ ಕಳಸ ಮತ್ತು ಹೊರನಾಡು ಸಂಪರ್ಕ ಕಡಿತಗೊಂಡಿತ್ತು. ಪರ್ಯಾಯ ಮಾರ್ಗವಾಗಿದ್ದ ಹಳುವಳ್ಳಿ ಬಳಿಯೂ ರಸ್ತೆ ಕುಸಿದಿದ್ದರಿಂದಾಗಿ ಹೊರನಾಡಿನ ಸಂಪರ್ಕ ಪೂರ್ಣ ಕಡಿತಗೊಂಡಿತ್ತು. ಇದೀಗ ಮಳೆ ಕಡಿಮೆಯಾಗಿದ್ದು, ನದಿಯ ನೀರಿನಲ್ಲಿಯೂ ಇಳಿಕೆಯಾಗಿರುವುದರಿಂದ ಹೆಬ್ಬಾಳೆ ಸೇತುವೆಯ ಮೇಲೆ ಹರಿಯುತ್ತಿದ್ದ ನೀರೂ ಇಳಿದಿದೆ. ರಸ್ತೆ ಸಂಚಾರ ಪುನಃ ಆರಂಭಗೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News