40 ಸಾವಿರ ಕುಟುಂಬಗಳ ಪುನರ್ವಸತಿಗೆ ಬದ್ದ : ಸಿಎಂ

Update: 2019-08-13 12:36 GMT

ಶಿವಮೊಗ್ಗ, ಆ. 13: ರಾಜ್ಯದಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ಸುಮಾರು 40 ಸಾವಿರ ಕುಟುಂಬಗಳ ಪುವರ್ವಸತಿಗೆ ಸರಕಾರ ಬದ್ದವಾಗಿದೆ. ಭಾಗಶ ಬಿದ್ದ ಮನೆಗಳ ರಿಪೇರಿಗೆ ತಕ್ಷಣ 1 ಲಕ್ಷ ರೂ. ಹಾಗೂ ಸಂಪೂರ್ಣ ಬಿದ್ದ ಮನೆ ನಿರ್ಮಾಣಕ್ಕೆ 5ಲಕ್ಷ ರೂ. ಪರಿಹಾರ ಕಲ್ಪಿಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‍ನಲ್ಲಿ ತೆರೆದಿರುವ ನೆರೆ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.

ಶಿವಮೊಗ್ಗ ನಗರದಲ್ಲಿ ಪ್ರವಾಹದಿಂದ ಹಾನಿಗೊಳಗಾದ 5 ಸಾವಿರ ಕುಟುಂಬಗಳಿಗೆ ಅಗತ್ಯ ಸಾಮಾಗ್ರಿ ಖರೀದಿಗೆ ತಲಾ 10 ಸಾವಿರ ರೂ. ಪರಿಹಾರ ಕಲ್ಪಿಸಲಾಗುವುದು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾನಿಗೀಡಾದ ರಸ್ತೆ, ಸೇತುವೆ, ಆಸ್ತಪಾಸ್ತಿಗಳ ನಿರ್ಮಾಣಕ್ಕೆ ತುರ್ತು 50 ಕೋಟಿ ರೂ. ಬಿಡುಗಡೆಗೊಳಿಸಲಾಗುವುದು. 

ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆ, ಸೇತುವೆಗಳ ನಿರ್ಮಾಣಕ್ಕೆ .50 ಲಕ್ಷ ರೂ.ಗಳ ಆರ್ಥಿಕ ನೆರವು ಒದಗಿಸಲಾಗುವುದು. ನಗರದ ಕೊಳಚೆ ಪ್ರದೇಶದಲ್ಲಿನ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಅಪಾರ್ಟ್‍ಮೆಂಟ್ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ತಜ್ಞರು, ಇಲಾಖಾ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಸಾಂಸದ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಶಾಸಕ ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ, ರುದ್ರೇಗೌಡ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News