ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪುನಾರಂಭಕ್ಕೆ 50 ಕೋಟಿ ರೂ. ಬಿಡುಗಡೆ : ಬಿ.ಎಸ್.ಯಡಿಯೂರಪ್ಪ

Update: 2019-08-13 12:39 GMT

ಶಿವಮೊಗ್ಗ, ಆ. 13: ಕಳೆದ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿ ಮತ್ತೆ ಪುನಾರಂಭಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿದ್ದು, ನೆನೆಗುದಿಗೆ ಬಿದ್ದಿರುವ ಕೆಲಸ ಪ್ರಾರಂಭಿಸಲು 50 ತಕ್ಷಣವೇ 50 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯಕ್ಕೆ ಬಾಗೀನ ಅರ್ಪಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ಸಂಬಂಧ ತಾನು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಶಿವಮೊಗ್ಗ ವಿಮಾನ ನಿಲ್ದಾಣ ಪೂರ್ಣಗೊಂಡು, ವಿಮಾನಗಳ ಓಡಾಟ ಆರಂಭವಾದರೆ ಹೊಸ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಜಿಲ್ಲೆ ಅಭಿವೃದ್ದಿಯಾಗಲಿದೆ ಎಂದರು. 

ಶಿವಮೊಗ್ಗ ನಗರದ ಹಳೇ ಜೈಲು ಮುಂಭಾಗದಲ್ಲಿರುವ ಶೆಡ್‍ಗಳನ್ನು ಇನ್ನೆರೆಡು ದಿನಗಳಲ್ಲಿ ತೆರವುಗೊಳಿಸಬೇಕು. ಇಲ್ಲಿನ ಜಾಗ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಕಾಲಮಿತಿಯಲ್ಲಿ ಕೈಗೊಳ್ಳಬೇಕು. ಇದಕ್ಕೆ ಸರ್ಕಾರದಿಂದ ಎಲ್ಲ ರೀತಿಯ ನೆರವು ಕಲ್ಪಿಸಲಾಗುವುದು ಎಂದು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿಗೆ ಸೂಚಿಸಿದರು. 

ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಯ ಮೂಲಕ ಋಣಿ ತೀರಿಸುತ್ತೆನೆ. ಜಿಲ್ಲೆಯನ್ನು ಹಾಗೂ ಶಿಕಾರಿಪುರ ತಾಲೂಕನ್ನು ಇಡೀ ರಾಜ್ಯಕ್ಕೆ ಮಾದರಿಯಾಗಿ ರೂಪಿಸುತ್ತೆನೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ದಿಗೆ ಅಗತ್ಯ ಕ್ರಮಕೈಗೊಳ್ಳುತ್ತೆನೆ. ಈ ಮೂಲಕ ಜಿಲ್ಲೆಯ ಋಣ ತೀರಿಸುತ್ತೆನೆ ಎಂದು ತಿಳಿಸಿದರು. 

ಮುಂದಿನ 3 ವರ್ಷ 10 ತಿಂಗಳ ಅಧಿಕಾರಾವಧಿಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೊಳಿಸಲಾಗುವುದು. ಮುಂದಿನ 3 ತಿಂಗಳಲ್ಲಿ ರಾಜ್ಯದಲ್ಲಿನ ಬದಲಾವಣೆ ನಿಮ್ಮ ಗಮನಕ್ಕೆ ಬರಲಿದೆ ಎಂದು ಸಾರ್ವಜನಿಕರಿಗೆ ತಿಳಿಸಿದರು. 

ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶಿಕಾರಿಪುರ ತಾಲೂಕಿನ ನೀರಾವರಿ ಯೋಜನೆಗಳಿಗೆ 1300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಟೆಂಡರ್ ಕರೆಯಲಾಗಿದೆ. ಕೆಲ ದಿನಗಳಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು.  ಅಂಬ್ಲಿಗೊಳ, ತಾಳಗುಂದ ಮೊದಲಾದ ಗ್ರಾಮಗಳ ಕೆರೆ ತುಂಬಿಸುವ ಏತ ನೀರಾವರಿಗೆ 850 ಕೋಟಿ ರೂ., ಶಿಕಾರಿಪುರ-ಶಿರಾಳಕೊಪ್ಪದ ಕುಡಿಯುವ ನೀರು ಪೂರೈಕೆ ಹಾಗೂ ನೀರಾವರಿಗೆ ಸಂಬಂಧಿಸಿದ ಹೊಸಹಳ್ಳಿ ಏತ ಯೋಜನೆಗೆ 305 ಕೋಟಿ ರೂ., ಕಲ್ಲೊಡ್ಡು ಯೋಜನೆಗೆ 125 ಕೋ., ಸೊರಬ ತಾಲೂಕಿನ ಮೂಗೂರು ಏತ ನೀರಾವರಿ ಯೋಜನೆಗೆ 105 ಕೋ. ರೂ. ಬಿಡುಗಡೆ ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News