ಸಂಪುಟವಿಲ್ಲದೆ ಸ್ವಾತಂತ್ರೋತ್ಸವ ಧ್ವಜಾರೋಹಣ: ಮುಖ್ಯಮಂತ್ರಿ ಯಡಿಯೂರಪ್ಪ ಹೊಸ ದಾಖಲೆ

Update: 2019-08-13 13:53 GMT

ಬೆಂಗಳೂರು, ಆ. 13: ಸಚಿವ ಸಂಪುಟವೇ ಇಲ್ಲದೆ ಆ.15ರ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ದಾಖಲೆ ಸೃಷ್ಟಿಸಲಿದ್ದಾರೆ.

ಈ ಹಿಂದೆ 2007ರಲ್ಲಿ 7 ದಿನ, 2018ರಲ್ಲಿ 3 ದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು, ಇದೀಗ ಸಚಿವ ಸಂಪುಟ ಇಲ್ಲದೆ ಸ್ವಾತಂತ್ರ ದಿನಾಚರಣೆಗೆ ಮುಂದಾಗಿದ್ದಾರೆ. ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಂಪುಟ ಇಲ್ಲದೆ ಸಿಎಂ ಸ್ವಾತಂತ್ರೋತ್ಸವ ಆಚರಿಸುತ್ತಿದ್ದಾರೆ ಎಂಬುದು ಗಮನಾರ್ಹ.

ಆ.15ರ ಬೆಳಗ್ಗೆ ಮುಖ್ಯಮಂತ್ರಿ ನಗರದ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸಿ, ರಾಜ್ಯದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರೆ, ಅದೇ ರೀತಿ ಆಯಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ ಜಿಲ್ಲೆಯ ಅಭಿವೃದ್ಧಿ ಕುರಿತು ಭಾಷಣ ಮಾಡುತ್ತಿದ್ದರು. ಆದರೆ, ರಾಜ್ಯದಲ್ಲಿ ಸಚಿವ ಸಂಪುಟ ರಚನೆಯಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಒಬ್ಬರೆ ಇದ್ದು, ಯಾವುದೇ ಸಚಿವರುಗಳು ಇಲ್ಲದ ಕಾರಣ, ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಸ್ವಾತಂತ್ರೋತ್ಸವ ಧ್ವಜಾರೋಹಣವನ್ನು ನೆರವೇರಿಸಲು ಈಗಾಗಲೇ ಸರಕಾರ ಆದೇಶ ಹೊರಡಿಸಿದೆ.

ರಾಷ್ಟ್ರಪತಿ ಆಳ್ವಿಕೆ ಇದ್ದಾಗ ಮಾತ್ರ ಜಿಲ್ಲಾಧಿಕಾರಿಗಳು ಧ್ವಜ ಹಾರಿಸಲು ಅನುಮತಿ ಇತ್ತು. ಈ ಬಾರಿ ಸರಕಾರವಿದ್ದರೂ ಸಚಿವ ಸಂಪುಟ ರಚನೆಯಾಗದ ಕಾರಣ ಜಿಲ್ಲಾಧಿಕಾರಿಗಳೇ ಆಯಾ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಲಿದ್ದಾರೆ. ಹೀಗಾಗಿ ರಾಜ್ಯದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಇಂತಹದ್ದೊಂದು ಸ್ಥಿತಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸಾಕ್ಷಿಯಾಗಿದೆ.

ಸ್ವಾತಂತ್ರೋತ್ಸವದ ಬಳಿಕವೇ ಸಂಪುಟ:  ಸಚಿವ ಸಂಪುಟ ರಚನೆ ಕುರಿತು ಬಿಜೆಪಿ ವರಿಷ್ಠರು ಈಗಾಗಲೇ ಸ್ಪಷ್ಟಣೆ ನೀಡಿದ್ದು, ಆ.15ರ ಸ್ವಾತಂತ್ರ್ಯ ದಿನಾಚರಣೆ ನಂತರವೇ ಸಚಿವ ಸಂಪುಟ ರಚನೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News