'ತುಂಗಭದ್ರಾ ಜಲಾಶಯ ಒಡೆದಿದೆ' ಎಂಬ ವದಂತಿ ನಂಬಿ ಗುಡ್ಡದ ಮೇಲೆ ಆಶ್ರಯ ಪಡೆದ ಜನರು

Update: 2019-08-13 15:20 GMT

ಬೆಂಗಳೂರು, ಆ. 13: ಭಾರೀ ಮಳೆ ಮತ್ತು ಪ್ರವಾಹ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ‘ಜಲಾಶಯ ಒಡೆದಿದೆ, ದೊಡ್ಡ ಪ್ರಮಾಣದ ನೆರೆ ನೀರು’ ಬರಲಿದೆ ಎಂಬ ವದಂತಿಗಳ ಭೀತಿ ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ.

ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಸೇರಿದಂತೆ ರಾಜ್ಯದ ಪ್ರವಾಹ ಪರಿಸ್ಥಿತಿ ಕೊಂಚ ಇಳಿಮುಖವಾಗಿದ್ದೂ, ಸಂಕಷ್ಟದಿಂದ ಹೊರಬರಲು ಜನತೆ ಪ್ರಯತ್ನ ನಡೆಸಿದ್ದಾರೆ. ಆದರೆ, ಕಿಡಿಗೇಡಿಗಳು ಹೊಸಪೇಟೆ, ಮುನಿರಾಬಾದ್‌ನಲ್ಲಿ ‘ತುಂಗಭದ್ರಾ ಜಲಾಶಯ ಒಡೆದಿದೆ’ ಎಂಬ ವಂದತಿ ಹಬ್ಬಿಸಿದ್ದರಿಂದ ಜನರು ಪ್ರಾಣ ರಕ್ಷಣೆಗಾಗಿ ಗುಡ್ಡದ ಮೇಲಿದ್ದ ಪ್ರಾರ್ಥನಾ ಮಂದಿರದಲ್ಲಿ ಆಶ್ರಯ ಪಡೆದಿದ್ದರು.

ಮಂಗಳವಾರ ಬೆಳಗ್ಗೆ ಅಣೆಕಟ್ಟೆಯ ಎಡದಂಡೆ ಮುಖ್ಯ ಕಾಲುವೆಯ ಒಂದು ಭಾಗ ಒಡೆದು, ಅಪಾರ ಪ್ರಮಾಣದ ನೀರು ಮುನಿರಾಬಾದ್‌ನ ಪಂಪಾವನ ಆವರಿಸಿಕೊಂಡಿತ್ತು. ಕೆಲವೇ ಕ್ಷಣಗಳಲ್ಲಿ ಈ ಸುದ್ದಿ, ಅದರ ಚಿತ್ರಗಳು ಸಾಮಾಜಿಕ ಹರಿದಾಡಿದವು. ಮುನಿರಾಬಾದ್ ತೊರೆಯಲು ಜನ ಮುಂದಾಗಿದ್ದರು.

ಆದರೆ, ‘ಯಾರು ಆತಂಕಪಡುವುದು ಬೇಡ. ಕಾಲುವೆಯ ಒಂದು ಭಾಗ ಹಾಳಾಗಿ ನೀರು ಹರಿದು ಹೋಗುತ್ತಿದೆ. ಅಣೆಕಟ್ಟೆ ಒಡೆದಿಲ್ಲ’ ಎಂದು ತುಂಗಭದ್ರಾ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್ ಬಸಪ್ಪಜಾನಕೆರೆ ಮಾಧ್ಯಮಗಳಿಗೆ ಸ್ಪಷ್ಟಣೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಆತಂಕಕ್ಕೆ ಸಿಲುಕಿದ್ದ ಜನತೆ ನಿರಾಳರಾಗಿ ಪುನಃ ತಮ್ಮ ಮನೆಗಳಿಗೆ ಮರಳಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News