ಕುಶಾಲನಗರ: ಪ್ರಯಾಣಿಕನ ಮೇಲೆ ಸಂಚಾರ ನಿಯಂತ್ರಕನಿಂದ ಹಲ್ಲೆ ಆರೋಪ

Update: 2019-08-13 16:00 GMT

ಮಡಿಕೇರಿ, ಆ.13 : ಪ್ರಯಾಣಿಕನ ಮೇಲೆ ಸಂಚಾರ ನಿಯಂತ್ರಕ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ಬಾಲೆ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿದರೆಂದು ಆರೋಪಿಸಿ ನಿಲ್ದಾಣದ ಸಂಚಾರಿ ನಿಯಂತ್ರಕ ಆತನ ಮೇಲೆ ಹಲ್ಲೆ ನಡೆಸಿ, ರಕ್ತ ಸುರಿಯುತ್ತಿದ್ದ ಪ್ರಯಾಣಿಕನನ್ನು ಅದೇ ಕೊಠಡಿಯೊಳಗೆ ಬಿಟ್ಟು ಬೀಗ ಹಾಕಿರುವುದಾಗಿ ಆರೋಪಿಸಲಾಗಿದೆ. 
ಈ ಸಂದರ್ಭ ವಿಷಯ ತಿಳಿದ  ಹೆಬ್ಬಾಲೆಯ ಗ್ರಾಮಸ್ಥರು ಸಂಚಾರಿ ನಿಯಂತ್ರಕರನ್ನು ತರಾಟೆಗೆ ತೆಗೆದುಕೊಂಡು ವಾಗ್ವಾದ ನಡೆಸಿ, ಕೈಕೈ ಮಿಲಾಯಿಸುವ ಹಂತಕ್ಕೆ ಪ್ರಕರಣ ತಲುಪಿತ್ತು.

ವಿಷಯ ತಿಳಿದ ತಕ್ಷಣ ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ, ಸಾರ್ವಜನಿಕರನ್ನು ಸಮಾಧಾನಗೊಳಿಸಿ ಸಂಚಾರ ನಿಯಂತ್ರಕ ಉಮೇಶ್ ಅವರನ್ನು ಠಾಣೆಗೆ ಕಳುಹಿಸಿದರು. ನಂತರ ಪೊಲೀಸರು ಕೊಠಡಿಯ ಬೀಗವನ್ನು ಒಡೆದು ರಕ್ತ ಸುರಿಯುತ್ತಿದ್ದ ಗಾಯಾಳು ಸಣ್ಣಯ್ಯ ಶೆಟ್ಟಿ ಎಂಬವರನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಿದರು. 

ಸಂಚಾರಿ ನಿಯಂತ್ರಕರ ಕೊಠಡಿಯಲ್ಲಿ ಸಂಚಾರ ನಿಯಂತ್ರಕ ಉಮೇಶ್ ಅವರು ಪ್ರಯಾಣಿಕ ಹೆಬ್ಬಾಲೆಯ ನಿವಾಸಿ ಸಣ್ಣಯ್ಯ ಶೆಟ್ಟಿ ಅವರಿಗೆ ರಾಡ್‍ನಿಂದ ಹೊಡೆದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. 

ಈ ಬಗ್ಗೆ ಸಣ್ಣಯ್ಯಶೆಟ್ಟಿ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಣ್ಣಯ್ಯ ಶೆಟ್ಟಿಯರಿಗೆ ತಲೆಗೆ ತೀವ್ರವಾದ ಪೆಟ್ಟಾಗಿದ್ದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ನಂದೀಶ್ ಭೇಟಿ ನೀಡಿ ಮೊಕದ್ದಮೆ ದಾಖಲಿಸಿಕೊಂಡು, ಮುಂದಿನ ಕ್ರಮಕೈಗೊಂಡಿದ್ದಾರೆ. 

ಸಣ್ಣಯ್ಯಶೆಟ್ಟಿ ಮದ್ಯ ಸೇವಿಸಿ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿ, ಕಛೇರಿಯೊಳಗೆ ಬಂದು ಅವರೇ ಕಿಟಕಿಯ ಕಬ್ಬಿಣದ ರಾಡ್‍ಗೆ ತಲೆ ಹೊಡೆದುಕೊಂಡಿದ್ದಾರೆ ಎಂದು ಸಂಚಾರಿ ನಿಯಂತ್ರಕ ಉಮೇಶ್ ದೂರು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News