ಕೂಡಲೇ ಸರ್ವಪಕ್ಷ ಸಭೆ ಕರೆದು ಚರ್ಚಿಸಿ, ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಉಗ್ರಪ್ಪ ಆಗ್ರಹ

Update: 2019-08-13 17:25 GMT

ಬೆಂಗಳೂರು, ಆ. 13: ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ 48 ಮಂದಿ ಸಾವನ್ನಪ್ಪಿದ್ದು, 12 ಮಂದಿ ಕಣ್ಮರೆಯಾಗಿದ್ದಾರೆ. ಕೋಟ್ಯಂತರ ರೂ.ನಷ್ಟ ಸಂಭವಿಸಿದೆ. ಆದರೆ, ಸಂಕಷ್ಟದಲ್ಲಿರುವ ಜನರಿಗೆ ತೆರವಿಗೆ ಧಾವಿಸಬೇಕಿದ್ದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಂಭಕರ್ಣನ ನಿದ್ದೆಯಲ್ಲಿವೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ಕೇಂದ್ರ ಸ್ಥಾಪಿಸಲಾಗಿದೆ. ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ 5 ಸಾವಿರ ಕೋಟಿ ರೂ.ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಟೀಕಿಸಿದರು.

ಸರ್ವಪಕ್ಷ ಸಭೆಗೆ ಆಗ್ರಹ: ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರಿಲ್ಲದೆ ಭೀಕರ ಬರ ಸ್ಥಿತಿಯಲ್ಲಿದ್ದಾರೆ. ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿ ಸೃಷ್ಟಿಯಾಗಿದೆ. ಹೀಗಾಗಿ ಕೂಡಲೇ ಸರ್ವಪಕ್ಷ ಸಭೆ ಕರೆದು, ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಲೋಕಸಭೆ ಚುನಾವಣೆ ಗೆಲ್ಲಲ್ಲು ಏನೆಲ್ಲ ಪ್ರಯತ್ನ ನಡೆಸಿದರೂ ಎಂಬುದನ್ನು ರಾಜ್ಯದ ಜನತೆ ಮರೆಯಲು ಸಾಧ್ಯವಿಲ್ಲ. ಆದರೆ, ಇದೀಗ ಸಂಕಷ್ಟದಲ್ಲಿರುವ ಜನರಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆಂಬುದನ್ನು ಗಮನಿಸಬೇಕಿದೆ ಎಂದು ಉಗ್ರಪ್ಪ ಹೇಳಿದರು.

ಕೂಡಲೇ ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ, ರಾಜ್ಯಕ್ಕೆ 5 ಸಾವಿರ ಕೋಟಿ ರೂ.ವಿಶೇಷ ಪ್ಯಾಕೇಜ್ ಘೋಷಿಸಬೇಕು. ರಾಜ್ಯದ ಮೇಲೆ ಪ್ರಧಾನಿ ಮೋದಿ ಮತ್ತು ಬಿಜೆಪಿಯವರಿಗೆ ಕಳಕಳಿ ಇದ್ದರೆ ಈ ಕಾರ್ಯಕ್ಕೆ ಅವರು ಕೂಡಲೇ ಮುಂದಾಗಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ಒನ್ ಮ್ಯಾನ್ ಶೋ: ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು 17 ದಿನಗಳ ಕಳೆದಿವೆ. ಆದರೆ, ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲ. ಬಿಎಸ್‌ವೈ ಅವರ ಒನ್ ಮ್ಯಾನ್ ಶೋ ನಡೆಯುತ್ತಿದೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಅವಧಿಯಲ್ಲಿ ಪದೇ ಪದೇ ಪತ್ರ ಬರೆಯುತ್ತಿದ್ದ ರಾಜ್ಯಪಾಲರು ಈಗ ಸುಮ್ಮನಿರುವುದೇಕೆ ಎಂದು ಉಗ್ರಪ್ಪ ಪ್ರಶ್ನಿಸಿದರು.

ರಾಜ್ಯದಲ್ಲಿ ಸಂಪುಟ ಇಲ್ಲದೇ ಅದು ಸರಕಾರ ಅನಿಸಿಕೊಳ್ಳುತ್ತದೆಯೆ. ಸಚಿವ ಸಂಪುಟ ರಚಿಸಲು ಆಗದಿದ್ದರೆ ಕೂಡಲೇ ಸರಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದ ಉಗ್ರಪ್ಪ, ದೇಶದ ಇತಿಹಾಸದಲ್ಲಿ ಈ ರೀತಿ ಎಲ್ಲೂ ನಡೆದಿರಲಿಲ್ಲ ಎಂದು ಟೀಕಿಸಿದರು.

163ನೆ ವಿಧಿಯ ಪ್ರಕಾರ ಸಚಿವ ಸಂಪುಟ ರಚನೆಯಾಗಬೇಕು. ಸರಕಾರ ಬಂದು 8 ದಿನದೊಳಗೆ ರಚನೆ ಮಾಡಬೇಕು. ಆದರೆ, ಬಿಜೆಪಿ ಸರಕಾರ ಬಂದು 17 ದಿನಗಳು ಕಳೆದರೂ ಸಚಿವ ಸಂಪುಟ ರಚನೆಯಾಗಿಲ್ಲ. ಹೀಗಾಗಿ ಇದು ಸಂವಿಧಾನದ ಉಲ್ಲಂಘನೆಯಾಗಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಸಲಹೆ ನೀಡಬೇಕು. ಕೂಡಲೇ ಸಂಪುಟ ರಚನೆ ಮಾಡಲು ಸಲಹೆ ನೀಡಬೇಕು ಎಂದರು.

‘ಪ್ರಧಾನಿ ಮೋದಿಯವರಿಗೆ ನೆರೆ ಸಂಕಷ್ಟದಲ್ಲಿರುವ ಕರ್ನಾಟಕ ರಾಜ್ಯಕ್ಕೆ ಅಗತ್ಯ ನೆರವು ನೀಡಲಿಲ್ಲ. ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೂ ಪ್ರಧಾನಿ ಆಗಮಿಸಲಿಲ್ಲ. ರಾಜ್ಯದ ಜನತೆ ಏನು ಮಲತಾಯಿ ಮಕ್ಕಳೇ? ಮೋದಿಯವರಿಗೆ ಕಾಡು ಪ್ರಾಣಿಗಳನ್ನು ತೋರಿಸುತ್ತೇವೆ ಬನ್ನಿ ಎಂದರೆ ಅಲ್ಲಿಗೆ ಹೋಗುತ್ತಾರೆ. ಆದರೆ, ರಾಜ್ಯದಲ್ಲಿ ಕಾಡು ಇಲ್ಲವೆಂದು ಬಂದಿಲ್ಲವೇ?’
-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News