ಕಳಸ: ಮಳೆ ನಿಂತರೂ ಆಸ್ತಿ, ಮನೆಗಳಿಗೆ ಹಾನಿ ತಪ್ಪುತ್ತಿಲ್ಲ

Update: 2019-08-13 18:05 GMT

ಕಳಸ, ಆ.13: ಹೋಬಳಿಯಾದ್ಯಂತ ಮಳೆಯ ಪ್ರಮಾಣ ಕಡಿಮೆಯಾದರೂ ಅಲ್ಲಲ್ಲಿ ಸಂಭವಿಸುತ್ತಿರುವ ಭೂಕುಸಿತದಿಂದಾಗಿ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿಯಾಗುತ್ತಿದ್ದು, ಸೋಮವಾರವೂ ಅಪಾಯದಲ್ಲಿ ಸಿಲುಕಿದ್ದ ಸುಮಾರು 20 ಕುಟುಂಬಗಳ ಸದಸ್ಯರನ್ನು ಹೋಬಳಿ ವ್ಯಾಪ್ತಿಯ ಸಂತ್ರಸ್ಥರ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿದೆ.

ಹೋಬಳಿಯ ಚನ್ನಡ್ಲು,ಕಂಕೋಡು,ಕೋಟೆಮಕ್ಕಿ,ಯಳಂದೂರು ಸ್ಥಳಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಇನ್ನೂ ಕೂಡ ತೆರಳಲು ಸಾಧ್ಯವಾಗುತ್ತಿಲ್ಲ. ಯಳಂದೂರಿನಲ್ಲಿ ನಾಲ್ಕು ಕುಟುಂಬಗಳನ್ನು ಕರೆದುಕೊಂಡು ಬಂದು ಹಿರೇಬೈಲ್ ಸಾಂತ್ವಾನ ಕೇಂದ್ರಕ್ಕೆ ಸೇರಿಸಲಾಗಿದೆ. ಕೋಟೆ ಮಕ್ಕಿಯ ಸುಮಾರು 40 ಜನರನ್ನು ಭದ್ರಾಕಾಳಿ ಶಾಲೆಯಲ್ಲಿರುವ ಸಾಂತ್ವಾನ ಕೇಂದ್ರದಲ್ಲಿ ಉಳಿಸಿಕೊಳ್ಳಲಾಗಿದೆ. ಸಾಂತ್ವಾನ ಕೇಂದ್ರದಲ್ಲಿ ಬೇಕಾಗುವ ಎಲ್ಲಾ ಸೌಲಬ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಿದೆ.

ಹೋಬಳಿಯಲ್ಲಿ ಮಳೆ ನಿಂತರೂ ಕೂಡ ಮನೆಗಳು ಬಿರುಕು ಬಿಟ್ಟು ಕುಸಿಯಲಾರಂಬಿಸಿವೆ. ರಸ್ತೆಗಳು ಕುಸಿಯುತ್ತಿವೆ. ತೋಟಗಳು ಜಾರಿ ಹೋಗುತ್ತಿವೆ. ನೂರಕ್ಕೂ ಹೆಚ್ಚು ಮನೆಗಳ ಸ್ಥಿತಿ ಅಪಾಯದಲ್ಲಿದೆ. ಮನೆಗಳನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ. ಹಲವಾರು ಜಾನುವಾರುಗಳು ಮಣ್ಣಿನಡಿಯಲ್ಲಿ ಸಿಲುಕಿ ಸಾವನ್ನಪ್ಪಿದೆ. ಸಾಕು ನಾಯಿಗಳು ತಮ್ಮ ವಾಸವಿದ್ದ ಜಾಗ ನೆಲಸಮವಾದ ಸ್ಥಳದಲ್ಲಿ ಕಣ್ಣಿರುಡುತ್ತಿರುವ ದೃಶ್ಯಗಳು ಮನಕಲಕುವಂತಾಗಿದೆ. 

ಹೋಬಳಿ ವ್ಯಾಪ್ತಿಯಲ್ಲಿ ಆದ ನಷ್ಟ ಇನ್ನೂ ಲೆಕ್ಕಕ್ಕೆ ಸಿಗುತ್ತಿಲ್ಲ. ನೂರಾರು ಎಕರೆ ಕಾಫಿ ಅಡಕೆ ಕಾಳುಮೆಣಸು ತೋಟಗಳು ಗದ್ದೆಗಳು ಹೇಳ ಹೆಸರಿಲ್ಲದಂತಾಗಿದೆ. ಸಾಲ ಶೂಲ ಮಾಡಿ ಮನೆ ಕಟ್ಟಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದ ಅದೆಷ್ಟೋ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಕಳಸ-ಬಾಳೆಹೊನ್ನೂರು ರಸ್ತೆ ಸಂಪರ್ಕ ಬಿಟ್ಟರೆ ಮತ್ತೆ ಎಲ್ಲಾ ಕಡೆಯ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಜಿಲ್ಲಾಡಳಿತ ರಸ್ತೆ ಸರಿಪಡಿಸಲು ಜೆಸಿಬಿಗಳನ್ನು ಕಳುಸಿದ್ದು, ಸ್ಥಳಿಯರು ಸೇರಿ ಅವಿರತ ಶ್ರಮ ಪಟ್ಟು ರಸ್ತೆಗಳ ಮರು ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜನಪ್ರತಿನಿಧಿಗಳಿಂದ ಸಾಂತ್ವಾನ: ಸಂಸದೆ ಶೋಭ ಕರಂದ್ಲಾಜೆ ಭದ್ರಾಕಾಳಿ ಶಾಲೆ ಸಾಂತ್ವಾನ ಕೇಂದ್ರಕ್ಕೆ ಬೇಟಿ ನೀಡಿ ಸಂತ್ರಸ್ಥರನ್ನು ವಿಚಾರಿಸಿದ್ದಾರೆ. ಶಾಸಕ ಎಂ.ಪಿ.ಕುಮಾರಸ್ವಾಮಿ,ಮಾಜಿ ಶಾಸಕ ಬಿ.ಬಿ.ನಿಂಗಯ್ಯ,ಜಿಲ್ಲಾ ಪಂಚಾಯತ್ ಸದಸ್ಯ ಕೆ.ಆರ್.ಪ್ರಭಾಕರ್, ತಾಪಂ ಸದಸ್ಯರಾದ ಮಹಮ್ಮದ್ ರಫೀಕ್, ರಾಜೇಂದ್ರ ಪ್ರಸಾದ್ ಸಾಂತ್ವಾನ ಕೇಂದ್ರಗಳಿಗೆ ಬೇಟಿ ನೀಡಿ ಸಂತ್ರಸ್ಥರಿಗೆ ದೈರ್ಯ ತುಂಬಿದ್ದಾರೆ. ಸೋಮವಾರ ಹೊರನಾಡು ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಹಿರೇಬೈಲು ಸಂಸ್ಕೃತಿ ಮಂದಿರದಲ್ಲಿರುವ ಸಾಂತ್ವಾನ ಕೇಂದ್ರಕ್ಕೆ ಬೇಟಿ ನೀಡಿ ಸಂತ್ರಸ್ಥರ ನೆರವಿಗೆ ನಿಂತಿದ್ದಾರೆ. ಸಾಂತ್ವಾನ ಕೇಂದ್ರಗಳಲ್ಲಿ ನೋಡೆಲ್ ಅಧಿಕಾರಿ ಚಂದ್ರಪ್ಪ,ರೆವಿನ್ಯೂ ಇನ್ಸ್‍ಪೆಕ್ಟರ್ ಅಜ್ಜೇ ಗೌಡ,ವಿಎ ಗಳಾದ ಪ್ರದೀಪ್,ಕವನ,ಪಿಡಿಒ ಶ್ರೀನಿವಾಸ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳಸ-ಕುದುರೆಮುಖ-ಕಾರ್ಕಳ ಮುಖ್ಯ ರಸ್ತೆಯ ಕಾರಗದ್ದೆ ಆಶ್ರಮ ಸಮೀಪ ರಸ್ತೆ ಸಂಪೂರ್ಣ ತುಂಡಾಗಿರುವುದರಿಂದ ಸ್ಥಳಿಯರು ರಸ್ತೆ ನಿಮಾಣದಲ್ಲಿ ಕೈಜೋಡಿಸಿದ್ದಾರೆ.

ತಾಲ್ಲೂಕು ಪಂಚಾಯತ್ ಸದಸ್ಯ ಮುಹಮ್ಮದ್ ರಫೀಕ್, ಚಿತ್ರನಿರ್ಮಾಪಕ ರವಿ ರೈ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ.ಪ್ರಕಾಶ್ ಕುಮಾರ್, ನಮ್ಮೂರು ಕಳಸ ವ್ಯಾಟ್ಸ್ ಆಪ್ ಗ್ರೂಪ್ ಇವರ ಮುಂದಾಳತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಈ ಕಾರ್ಯದಲ್ಲಿ ಪಾಲ್ಗೊಂಡರು.

ಬೆಳಗ್ಗೆಯಿಂದ ಬೃಹತ್ ಕ್ರೇನ್, ಜೆಸಿಬಿಗಳನ್ನು ಬಳಸಿ ಬ್ರಹತ್ ಪೈಪ್ ಗಳನ್ನು ಅಳವಡಿಸಿ ರಸ್ತೆಯ ಮರು ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News