ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ವಿಳಂಬವೇಕೆ?

Update: 2019-08-14 05:50 GMT

ಈ ವರ್ಷದ ಮುಂಗಾರು ಮಳೆ ಮತ್ತು ಪ್ರವಾಹದ ಹೊಡೆತದಿಂದ ಕರ್ನಾಟಕ ಮಾತ್ರವಲ್ಲ, ಕೇರಳ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳು ತತ್ತರಿಸಿ ಹೋಗಿವೆ.ಲಕ್ಷಾಂತರ ಕೋಟಿ ರೂಪಾಯಿ ನಷ್ಟವುಂಟಾಗಿದೆ. ಇನ್ನೂರಕ್ಕೂ ಹೆಚ್ಚು ಜನ ಅಸು ನೀಗಿದ್ದಾರೆ. ನಿಖರವಾದ ಅಂಕಿ ಅಂಶಗಳು ಇನ್ನೂ ಲಭ್ಯವಾಗಿಲ್ಲ. ಮಳೆ ಮತ್ತು ಪ್ರವಾಹದ ನಂತರ ಅದರ ಹೊಡೆತಕ್ಕೆ ಸಿಕ್ಕ ಜನರ ಬದುಕು ಇನ್ನೂ ಶೋಚನೀಯ ವಾಗಿದೆ, ಕಷ್ಟಪಟ್ಟು ಕಟ್ಟಿಕೊಂಡ ಬದುಕು ಛಿದ್ರ ಛಿದ್ರವಾಗಿದೆ. ಈಗೇನೋ ಸೇನಾಪಡೆ, ನೌಕಾಪಡೆ, ಎನ್‌ಡಿಆರ್‌ಎಫ್ ಪೊಲೀಸರು ವಿವಿಧ ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಅನೇಕರನ್ನು ಬದುಕಿಸಿದ್ದಾರೆ. ಆದರೆ ಮುಂದಿನ ದಿನಗಳ ಸವಾಲು ಇನ್ನೂ ಗಂಭೀರವಾಗಿದೆ.ಕುಸಿದು ಹೋದ ಮನೆಗಳು, ನೀರು ಪಾಲಾಗಿ ಹಾಳಾದ ಬೆಳೆ ಇನ್ನಿತರ ಭೌತಿಕ ನಷ್ಟವನ್ನು ತುಂಬಿಕೊಳ್ಳುವುದು ಸುಲಭವಲ್ಲ. ಈ ನಷ್ಟದ ಪ್ರಮಾಣ ಊಹಿಸಲೂ ಸಾಧ್ಯವಿಲ್ಲ. ಕೇಂದ್ರ ಸರಕಾರದ ನೆರವು ಈ ನಾಲ್ಕೂ ರಾಜ್ಯಗಳಿಗೆ ಅನಿವಾರ್ಯವಾಗಿದೆ

 ಅದರಲ್ಲೂ ಕರ್ನಾಟಕದ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಮುಕ್ಕಾಲು ಕರ್ನಾಟಕ ಮಳೆ, ಪ್ರವಾಹದ ಹೊಡೆತದಿಂದ ತತ್ತರಿಸಿದೆ. ಇನ್ನು ಕೆಲವೆಡೆ ಬರ ಪರಿಸ್ಥಿತಿ ಇದೆ. ಈ ಜಲಪ್ರಳಯದಿಂದ ರಾಜ್ಯದಲ್ಲಿ ಒಟ್ಟು ಒಂದು ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಐವತ್ತು ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಅವರು ಕೇಂದ್ರದಿಂದ ಕೇವಲ ಮೂರು ಸಾವಿರ ಕೋಟಿ ತುರ್ತು ನೆರವನ್ನು ಮಾತ್ರ ಕೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರಕ್ಕೆ ನೆರವು ಕೇಳುವಾಗ ಮುಖ್ಯಮಂತ್ರಿ ಯಾವುದೇ ಮುಲಾಜನ್ನು ಮಾಡಬಾರದು. ಅಗತ್ಯ ಬಿದ್ದರೆ ಸರ್ವಪಕ್ಷಗಳ ನಿಯೋಗವನ್ನು ದಿಲ್ಲಿಗೆ ಕರೆದೊಯ್ದು ಹೆಚ್ಚಿನ ನೆರವಿಗೆ ಒತ್ತಡ ಹೇರಬೇಕು.

ರಾಜ್ಯದಲ್ಲಿ ಉತ್ತರ ಕರ್ನಾಟಕ ಮಾತ್ರವಲ್ಲ ಮಲೆನಾಡು, ಕರಾವಳಿಗಳ ಪರಿಸ್ಥಿತಿ ಕೂಡ ಗಂಭೀರವಾಗಿದೆ. ಕಳೆದ ವರ್ಷ ಪ್ರವಾಹದ ಹೊಡೆತಕ್ಕೆ ಸಿಕ್ಕಿದ್ದ ಕೊಡಗು ಈ ಬಾರಿಯೂ ಸಾಕಷ್ಟು ಹಾನಿಗೊಳಗಾಗಿದೆ. ಸಾವಿರಾರು ಕೋಟಿ ರೂಪಾಯಿ ಆಸ್ತಿಪಾಸ್ತಿ ಹಾಗೂ ಮೂಲ ಸೌಕರ್ಯ ಹಾಳಾಗಿ ಹೋಗಿದೆ. ಎರಡೂವರೆ ಕೋಟಿ ಜನರ ಬದುಕು ಅಸ್ತವ್ಯಸ್ತಗೊಂಡಿದೆ. ರಾಜ್ಯದ ಹತ್ತು ನದಿಗಳು, ಹದಿನೈದು ಜಲಾಶಯಗಳು ತುಂಬಿ ನೀರು ಹೊರಗೆ ಬಿಡುತ್ತಿರುವುದರಿಂದ ಉಂಟಾಗಿರುವ ಬೆಳೆ ಹಾನಿ ಅಪಾರವಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಹದಿನೈದು ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. 1,780 ಹಳ್ಳಿಗಳು ನೀರಿನಲ್ಲಿ ಮುಳುಗಿವೆ. ಒಂದೂವರೆ ಲಕ್ಷ ಮನೆಗಳು ಕುಸಿದಿವೆ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭೂಕುಸಿತದಿಂದ ಸಾಕಷ್ಟು ನಷ್ಟವುಂಟಾಗಿದೆ.

ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ತಾನಾಗಿ ಸೂಕ್ತ ಪರಿಹಾರ ಘೋಷಿಸಬೇಕು. ಕೇಂದ್ರ ಸರಕಾರ ಕೊಡುವುದು ಭಿಕ್ಷೆಯಲ್ಲ. ಕರ್ನಾಟಕದ ಜನ ಭಿಕ್ಷುಕರಲ್ಲ. ಅವರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಬೇಕು. ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಬಾರದು.
 ರಾಜ್ಯದಲ್ಲಿ ಸರಕಾರವೇ ಇಲ್ಲದಂತಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಓಡಾಡುತ್ತಿದ್ದಾರೆ. ಆದರೆ ಅವರಿಗೆ ಜೊತೆ ನೀಡಲು ಮಂತ್ರಿಗಳೇ ಇಲ್ಲ. ಮಂತ್ರಿ ಮಂಡಲ ರಚಿಸಲು ದಿಲ್ಲಿ ದೊರೆಗಳು ಅನುಮತಿ ನೀಡಿಲ್ಲ. ಹೀಗಾಗಿ ಪರಿಹಾರ ಕಾರ್ಯ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ.

ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಕೇಂದ್ರ ಸರಕಾರ ಈ ಜಲಪ್ರಳಯವನ್ನು ರಾಷ್ಟ್ರೀಯ ವಿಪತ್ತು ಎಂದು ತಕ್ಷಣ ಘೋಷಿಸಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸಬೇಕು. ಮಹಾರಾಷ್ಟ್ರದಲ್ಲಿ ಭಾರೀ ಮಳೆಯ ಪರಿಣಾಮವಾಗಿ ಕರ್ನಾಟಕದಲ್ಲಿ ನೆರೆ ಹಾವಳಿ ಉಂಟಾಗಿದೆ. ಆ ರಾಜ್ಯದ ಕೊಲ್ಲಾಪುರ, ಸಾಂಗ್ಲಿ ಜಿಲ್ಲೆಗಳಲ್ಲೂ ಮಳೆ ಮತ್ತು ಪ್ರವಾಹ ಭಾರೀ ನಷ್ಟವನ್ನುಂಟು ಮಾಡಿದೆ. ಅಲ್ಲಿ 40 ಕ್ಕೂ ಹೆಚ್ಚು ಜನ ಅಸು ನೀಗಿದ್ದಾರೆ. ನಾಲ್ಕು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಕೇರಳದಲ್ಲಿ ಭಾರೀ ಮಳೆಯಿಂದಾಗಿ ನೂರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಅಲ್ಲಿ ಮೂರು ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಗುಜರಾತ್‌ನಲ್ಲಿ ಪ್ರವಾಹ ಮತ್ತು ಮಳೆಯಿಂದ ಮೂವತ್ತು ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಕೇರಳ ರಾಜ್ಯಗಳು ಕೇಂದ್ರಕ್ಕೆ ಅತ್ಯಂತ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯಗಳಾಗಿವೆ. ಈ ರಾಜ್ಯಗಳೇ ಸಂಕಷ್ಟದ ಸುಳಿಗೆ ಸಿಲುಕಿದಾಗ ಕೇಂದ್ರ ಸರಕಾರ ವಿಳಂಬ ಮಾಡದೆ ನೆರವಿಗೆ ಧಾವಿಸಬೇಕು

 ಮಳೆ ಮತ್ತು ಪ್ರವಾಹದ ನಷ್ಟದ ಅಂದಾಜು ಇನ್ನೂ ಸಿಕ್ಕಿಲ್ಲ. ಕೇಂದ್ರ ಸರಕಾರ ನಾಲ್ಕೂ ರಾಜ್ಯಗಳಿಗೆ ಹಿರಿಯ ಮಂತ್ರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಳಿಸಿಕೊಡಬೇಕು. ಆ ತಂಡ ಮಳೆ ಮತ್ತು ಪ್ರವಾಹದ ನಿಖರ ಅಂದಾಜು ಮಾಡಬೇಕು. ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಕಾರ್ಬೆಟ್ ಕಾನನದ ಪ್ರವಾಸದಂತಹ ಸಾಹಸಗಳನ್ನು ಕೊಂಚ ಮುಂದೂಡಿ ಪ್ರವಾಹ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸಬೇಕು. ತಕ್ಷಣ ಈ ನೆರೆಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ವಿಶೇಷ ಪ್ಯಾಕೇಜ್ ನೀಡಬೇಕು. ಇಂತಹ ಸಂಕಷ್ಟದ ಕಾಲದಲ್ಲಿ ಮಾನವಿಯತೆಯಿಂದ ವರ್ತಿಸಬೇಕು.

ಕರ್ನಾಟಕದ ಪರಿಸ್ಥಿತಿ ಉಳಿದ ರಾಜ್ಯಗಳಿಗಿಂತ ಭಿನ್ನವಾಗಿದೆ. ಹಿಂದೆ ಇಂತಹ ಪ್ರವಾಹದ ಪರಿಸ್ಥಿತಿ ಉಂಟಾದಾಗ ಸಂತ್ರಸ್ತರ ಜೊತೆಗೆ ನಿಂತು ಪರಿಹಾರ ಸೌಲಭ್ಯಗಳನ್ನು ಕೊಡಿಸಲು, ಅಧಿಕಾರಿಗಳ ಮೇಲೆ ಒತ್ತಡ ತರಲು ಆಯಾ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಿದ್ದರು. ಈಗ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಲ್ಲ. ಹೀಗಾಗಿ ಪರಿಹಾರ ಕಾರ್ಯ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯದ ಸಂಸದರು ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿದೆ. ಆದರೆ ಅಂಥ ಬದ್ಧತೆ ಅವರಲ್ಲಿ ಕಾಣುತ್ತಿಲ್ಲ. ಕರ್ನಾಟಕದಿಂದ ಬಿಜೆಪಿಯಿಂದ 25 ಲೋಕಸಭಾ ಸದಸ್ಯರಿದ್ದಾರೆ. ಅವರು ಈ ಸಂಕಷ್ಟದ ಸಂದರ್ಭದಲ್ಲಿ ನೊಂದವರ ನೋವಿಗೆ ಸ್ಪಂದಿಸಬೇಕು. ಕಾರವಾರದ ಸಂಸದ ಅನಂತಕುಮಾರ ಹೆಗಡೆ ಕಿತ್ತೂರಿನಲ್ಲಿ ಪ್ರವಾಹ ಸಂತ್ರಸ್ತರ ಜೊತೆ ಒರಟಾಗಿ ವರ್ತಿಸಿದ್ದು ಸರಿಯಲ್ಲ.

 ಈ ಮಳೆ ಮತ್ತು ಪ್ರವಾಹದ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಲ್ಲಿ ಕೇಂದ್ರ ಸರಕಾರ ವಿಳಂಬ ಮಾಡಬಾರದು. ತಮ್ಮನ್ನು ಅಧಿಕಾರ ಸ್ಥಾನದ ಮೇಲೆ ಕೂರಿಸಿದ ಪ್ರಭುಗಳು ಬೀದಿಗೆ ಬಿದ್ದಿದ್ದಾರೆ, ಮನೆ ಮಾರು ಕಳೆದುಕೊಂಡಿದ್ದಾರೆ, ಅವರ ಕುಸಿದ ಬದುಕನ್ನು ಮತ್ತೆ ಕಟ್ಟಿ ನಿಲ್ಲಿಸಲು ನಮ್ಮ ಸರಕಾರಗಳು ಉದಾರವಾಗಿ, ಮಾನವೀಯವಾಗಿ ಸ್ಪಂದಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News