​ಸ್ನಾನದ ನೀರು ಉಳಿಸಲು ಬಾಲಕಿಯರ ಕೂದಲಿಗೆ ಕತ್ತರಿ !

Update: 2019-08-14 04:13 GMT
ಸಾಂದರ್ಭಿಕ ಚಿತ್ರ

ಮೇಡಕ್: ಬುಡಕಟ್ಟು ಬಾಲಕಿಯರ ಗುರುಕುಲ ಶಾಲೆಯೊಂದರಲ್ಲಿ, ಸ್ನಾನಕ್ಕೆ ಬೇಕಾಗುವ ನೀರು ಉಳಿಸುವ ಸಲುವಾಗಿ 150 ಬಾಲಕಿಯರ ಕೂದಲಿಗೆ ಕತ್ತರಿ ಹಾಕಿದ ಘಟನೆ ವರದಿಯಾಗಿದೆ.

ಹಾಸ್ಟೆಲ್‌ನಲ್ಲಿ ನೀರಿನ ಕೊರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ. ಶಾಲೆಯ ಪ್ರಾಚಾರ್ಯರಾದ ಕೆ. ಅರುಣಾ, ಇಬ್ಬರು ಕ್ಷೌರಿಕರನ್ನು ಹಾಸ್ಟೆಲ್‌ಗೆ ಕರೆಸಿ ಬಾಲಕಿಯರ ಕೂದಲು ಕತ್ತರಿಸಲು ಆದೇಶಿಸಿದ್ದು, ಪ್ರತಿ ವಿದ್ಯಾರ್ಥಿನಿ 25 ರೂ. ಪಾವತಿಸುವಂತೆ ಸೂಚಿಸಲಾಗಿತ್ತು.

ರವಿವಾರ ಹಾಗೂ ಸೋಮವಾರ ತಮ್ಮ ಮಕ್ಕಳನ್ನು ನೋಡಲು ಪೋಷಕರು ಬಂದಾಗ, ಹುಡುಗರ ಹೇರ್‌ಕಟ್‌ನಂತೆ ಕಂಡಾಗ ಈ ಘಟನೆ ಬೆಳಕಿಗೆ ಬಂದಿದೆ, ಮಕ್ಕಳನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಕೆಲ ಪೋಷಕರು ಶಾಲಾ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದರೆ ಮತ್ತೆ ಕೆಲವರು ಪ್ರತಿಭಟನೆ ನಡೆಸಿದರು. ಕೆಲ ಸಿಬ್ಬಂದಿಯ ಮೇಲೆ ಹಲ್ಲೆಯೂ ನಡೆದಿದೆ ಎಂದು ಹೇಳಲಾಗುತ್ತಿದೆ.

ಕೂದಲನ್ನು ಚೊಕ್ಕವಾಗಿ ನಿರ್ವಹಿಸಲು ಬಹಳಷ್ಟು ಮಂದಿಗೆ ಸಾಧ್ಯವಾಗುತ್ತಿಲ್ಲ ಹಾಗೂ ನೀರಿನ ಕೊರತೆ ಕೂಡಾ ಇರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾಗಿ ಶಾಲಾ ಸಿಬ್ಬಂದಿ ಸಬೂಬು ಹೇಳಿದ್ದಾರೆ. ಮಕ್ಕಳ ಕೂದಲ ಬುಡದಲ್ಲಿ ಗಾಯಗಳಿದ್ದ ಕಾರಣ ಕೂದಲು ಕತ್ತರಿಸಲು ಸೂಚಿಸಲಾಗಿದೆ ಎಂದು ಕೆಲವರು ಸಮುಜಾಯಿಷಿ ನೀಡಿದರು.

ಯಾರ ಒಪ್ಪಿಗೆಯನ್ನೂ ಪಡೆಯದೇ ಬಲಾತ್ಕಾರವಾಗಿ ಕೂದಲು ಕತ್ತರಿಸಲಾಗಿದೆ ಎಂದು ಬಾಲಕಿಯರು ದೂರಿದ್ದಾರೆ.

ಘಟನೆ ಬಗ್ಗೆ ತಕ್ಷಣ ವಿವರಣೆ ನೀಡುವಂತೆ ಜಿಲ್ಲಾಧಿಕಾರಿ ಡಿ. ಧರ್ಮ ರೆಡ್ಡಿ ಆದೇಶಿಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಅಧಿಕಾರಿಯನ್ನು ನೇಮಿಸಿ ವರದಿ ಸಲ್ಲಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News