ಪ್ರವಾಹ ಪೀಡಿತ ಗ್ರಾಮದಲ್ಲಿ ಸಂಸದ ಅನಂತಕುಮಾರ್ ಹೆಗಡೆಗೆ ಮುತ್ತಿಗೆ ಹಾಕಿದ ರೈತರು

Update: 2019-08-14 12:48 GMT

ಮುಂಡಗೋಡ, ಆ.14: ಉತ್ತರಕನ್ನಡ ಲೋಕಸಭಾ ಸದಸ್ಯ ಅನಂತಕುಮಾರ್ ಹೆಗಡೆಗೆ ತಾಲೂಕಿನ ಚಿಗಳ್ಳಿ ಹಾಗೂ ಮುಡಸಾಲಿ ರೈತರು ಮುತ್ತಿಗೆ ಹಾಕಿದ ಘಟನೆ ಮಂಗಳವಾರ ನಡೆಯಿತು.

ಮುಂಡಗೋಡದಲ್ಲಿ ಭಾರೀ ಮಳೆಯಿಂದ ಬೆಳೆಹಾನಿ ಹಾಗೂ ಆಸ್ತಿಪಾಸ್ತಿ ನಷ್ಟವಾಗಿದ್ದು, ಘಟನಾ ಸ್ಥಳಗಳನ್ನು ಪರಿಶೀಲಿಸಲು ಅನಂತಕುಮಾರ್ ಹೆಗಡೆ ಮುಡಸಾಲಿ ಗ್ರಾಮಕ್ಕೆ ಬಂದಾಗ ಮುತ್ತಿಗೆ ಹಾಕಿದ ರೈತರು, ಭಾರೀ ಮಳೆಗೆ ಚಿಗಳ್ಳಿ ಜಲಾಶಯ ಒಡೆದಿದ್ದರಿಂದ ರೈತರ ಬೆಳೆ ನಾಶವಾಗಿದ್ದು, ಅಪಾರ ಹಾನಿಯಾಗಿದೆ. ಅದನ್ನು ಪರಿಶೀಲಿಸಬೇಕು ಎಂದು ರೈತರು ವಿನಂತಿಸಿದ್ದಾರೆ. ಈ ವೇಳೆ ಅನಂತಕುಮಾರ್ ಹೆಗಡೆ, ತನಗೆ ಇದಕ್ಕಿಂತ ಹೆಚ್ಚಿನ ಪ್ರಮಾನದಲ್ಲಿ ಹಾನಿಯಾದ ಪ್ರದೇಶಗಳಿಗೆ ಹೋಗಬೇಕಿದೆ. ಈಗ ಬರಲು ಸಾಧ್ಯವಿಲ್ಲ ಎಂದು ತಮ್ಮ ವಾಹನವೇರಿ ಮುಂದೆ ಹೋಗಿದ್ದಾರೆ. ಈ ವೇಳೆ ರೈತರು ಸಂಸದರ ವಾಹನ ತಡೆದು, ಚುನಾವಣೆ ಬಂದಾಗ ಮನೆ ಮನೆಗೆ ಬಂದು ಓಟು ಕೇಳುತ್ತಿರಿ. ಈಗ ನಾವು ತೊಂದರೆಯಲ್ಲಿದ್ದೇವೆ. ಯಾರೂ ಬರುವುದಿಲ್ಲ, ನಾವು ಯಾರನ್ನು ಕೇಳಬೇಕು ಎಂದು ಪ್ರಶ್ನಿಸಿದ್ದಾರೆ.

ಆದರೆ ಇದನ್ನು ಕೇಳದೇ ಅಲ್ಲಿಂದ ಹೊರಟ ಸಂಸದರು ಚಿಗಳ್ಳಿ ಗ್ರಾಮದ ಕಡೆಗೆ ಬರುತ್ತಿದ್ದಂತೆ ಮತ್ತೇ ಮುತ್ತಿಗೆ ಹಾಕಿದ ರೈತರು, ನಮ್ಮ ಬೆಳೆ ಹಾನಿಯಾಗಿದೆ. ಈಗ ನೀವು ಬಂದಿದ್ದೀರಿ. ಚುನಾವಣೆ ಬಂದಾಗ ಮನೆ ಮನೆಗೆ ಬಂದು ಓಟು ಕೇಳುತ್ತಿರಿ. ಈಗ ನಿಮಗೆ ರೈತರ ನೆನಪಾಗುವುದಿಲ್ಲವೇ ? ಎಂದು ಅಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಹಾಗೂ ಪಕ್ಷದ ಮುಖಂಡರು ರೈತರನ್ನು ಸಮಾಧಾನ ಪಡಿಸಿದ್ದು, ಆ ಬಳಿಕ ಸಂಸದರು ಅಲ್ಲಿಂದ ತೆರಳಿದರು.

ಸಂಸದ ಅನಂತಕುಮಾರ ಹೆಗಡೆ ಅವರು ಚಿಗಳ್ಳಿ ಡ್ಯಾಂ ಒಡೆದಿದ್ದನ್ನು ನೋಡದೇ ಚಿಗಳ್ಳಿ ರಸ್ತೆ ಮೇಲೆಯೇ ನಿಂತು ಹೊಲವನ್ನು ನೋಡಿ ಸನವಳ್ಳಿ ಜಲಾಶಯಕ್ಕೆ ಹೋಗಬೇಕೆಂದು ಅಲ್ಲಿಂದ ತೆರಳಿದರು. ಚಿಗಳ್ಳಿಯಲ್ಲಿ ರೈತರು ಪ್ರತಿಭಟಿಸಿ ಮುತ್ತಿಗೆ ಹಾಕುತ್ತಿದ್ದಂತೆಯೇ ಮುಂಡಗೋಡಕ್ಕೆ ಬರುವ ಮಾರ್ಗವನ್ನು ಬದಲಾಯಿಸಿ ಚಿಗಳ್ಳಿಯಿಂದ ಸಾಲಗಾಂವ ಮೂಲಕ ಸಂಸದರು ಸನವಳ್ಳಿ ಡ್ಯಾಂ ವೀಕ್ಷಿಸಲು ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News