ವಿರಾಜಪೇಟೆಯ ಬೆಟ್ಟದಲ್ಲಿ ಅಪಾಯಕಾರಿ ಬಿರುಕು: 50ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

Update: 2019-08-14 13:27 GMT

ಮಡಿಕೇರಿ, ಆ.14: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ವಿರಾಜಪೇಟೆಯ ಅಯ್ಯಪ್ಪ ಬೆಟ್ಟದಲ್ಲಿ ಅಪಾಯಕಾರಿ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಯಾಗಿದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ಸುಮಾರು 50 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಿದೆ.

ಬಿರುಕು ಬಿಟ್ಟ ಬೆಟ್ಟ ಪ್ರದೇಶಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ರೋಜಾ, ಲಾಯಲ್, ರಾಹುಲ್, ಗಿರೀಶ್ ತಂಡ ಭೇಟಿ ನೀಡಿ ಪರಿಸೀಲನೆ ನಡೆಸಿ ಬೆಟ್ಟದ ಕೆಳ ಭಾಗದಲ್ಲಿರುವ ಮನೆಗಳನ್ನು ತೆರವುಗೊಳಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. 

ಮತ್ತೊಂದೆಡೆ ಕಾರುಗುಂದ ಗ್ರಾಮದಲ್ಲಿ ಭೂಮಿ ಬಿರುಕು ಕಾಣಿಸಿಕೊಂಡಿದೆ. ಗ್ರಾಮದ ನಾಪಂಡ ಕುಟುಂಬಸ್ಥರ ಐನ್‍ಮನೆ ಬಳಿ ಭೂಮಿ ಬಾಯಿಬಿಟ್ಟಿದೆ. ಪುರಾತನ ಕಾಲದ ಐನ್‍ಮನೆ ಬಳಿಯಿಂದ ಸುಮಾರು 100 ಮೀಟರ್ ವರೆಗೆ ಅರ್ಧ ಅಡಿಗೂ ಹೆಚ್ಚಿಗೆ ಅಗಲದಲ್ಲಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಐನ್‍ಮನೆಯ ಹಿಂಬದಿಯ ಹೊಸ ಅಡುಗೆ ಕೋಣೆಯಲ್ಲಿ ಬಿರುಕು ಬಿಟ್ಟಿದ್ದು, ಮನೆಗೂ ಹಾನಿಯಾಗಿದೆ. ಸಮತಟ್ಟು ಪ್ರದೇಶದಲ್ಲಿ ಈ ರೀತಿಯ ಬಿರುಕು ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. 

ವಿರಾಜಪೇಟೆ ಪಟ್ಟಣದ ಅರಸುನಗರದಲ್ಲಿ ಕೂಡ ಬಿರುಕು ಕಾಣಿಸಿಕೊಂಡಿದೆ. 

ಅಂತರ್ಜಲ ಒತ್ತಡ
ಅಂತರ್ಜಲದ ಒತ್ತಡ ಅಧಿಕಗೊಂಡು ಭೂ ಪದರದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇದರಿಂದ ಸನಿಹದಲ್ಲಿರುವ ಮನೆಗಳು ಹಾಗೂ ಭೂ ಕುಸಿತ ಉಂಟಾಗುವ ಸಾಧ್ಯತೆಯಿದೆ. ಇಂತಹ ಪ್ರದೇಶಗಳಲ್ಲಿ ಕೆಲವು ಕಾಲ ವಾಸ ಮಾಡುವುದು ಸೂಕ್ತವಲ್ಲ. ಇಲ್ಲಿಯ ಪರಿಸ್ಥಿತಿಗಳ ಬಗ್ಗೆ ವಿಸ್ತೃತ ವರದಿಯನ್ನು ಸಿದ್ಧಗೊಳಿಸಿ ಜಿಲ್ಲಾಧಿಕಾರಿಗಳಿಗೆ ನೀಡಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೋಜಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News