ಮಡಿಕೇರಿ: ಬೆಟ್ಟ ಕುಸಿದ ಪ್ರದೇಶದಲ್ಲಿ ಮತ್ತೊಂದು ಮೃತದೇಹ ಪತ್ತೆ

Update: 2019-08-14 13:33 GMT

ಮಡಿಕೇರಿ, ಆ.14: ವಿರಾಜಪೇಟೆಯ ತೋರಾ ಗ್ರಾಮದಲ್ಲಿ ಮಣಿಪಾರೆ ಬೆಟ್ಟ ಕುಸಿದು ಕಾಣೆಯಾಗಿದ್ದ ಅಪ್ಪು (60) ಅವರ ಮೃತದೇಹ ಬುಧವಾರ ಪತ್ತೆಯಾಗಿದೆ. ಇದರೊಂದಿಗೆ ಪ್ರಕೃತಿ ವಿಕೋಪದಲ್ಲಿ ಸಾವಿಗೀಡಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಆ.9 ರಂದು ತೋರ ಗ್ರಾಮದಲ್ಲಿ ಬೆಟ್ಟ ಪ್ರದೇಶ ಭಾರೀ ಕುಸಿತಕ್ಕೆ ಒಳಗಾಗಿ ಇಬ್ಬರು ಸಾವನ್ನಪ್ಪಿ, ಎಂಟು ಮಂದಿ ನಾಪತ್ತೆಯಾಗಿದ್ದರು. 
ಈ ಪೈಕಿ ಸಾವಿಗೀಡಾಗಿದ್ದ ಮಮತಾ (40) ಹಾಗೂ ಲಿಖಿತಾ(15) ಎಂಬ ತಾಯಿ ಮಗಳ ಮೃತದೇಹವನ್ನು ಅಂದೇ ಪತ್ತೆ ಮಾಡಿ ಹೊರತೆಗೆಯಲಾಗಿತ್ತಾದರೂ, ನಾಪತ್ತೆಯಾಗಿದ್ದವರ ಶೋಧ ಕಾರ್ಯಕ್ಕೆ ಮಳೆಯಿಂದ ಅಡಚಣೆಯಾಗಿತ್ತು. ಸೈನ್ಯದ ತುಕಡಿ, ಎನ್‍ಡಿಆರ್‍ಎಫ್, ಪೊಲೀಸ್ ತಂಡಗಳು ಹರಸಾಹಸದಿಂದ ಕಾರ್ಯಾಚರಣೆ ನಡೆಸುವ ಮೂಲಕ ಸೋಮವಾರ ಅನುಸೂಯ ಎಂಬುವವರ ಮೃತದೇಹ ಪತ್ತೆಯಾಗಿತ್ತು. 

ಮಂಗಳವಾರ ಆರು ಹಿಟಾಚಿ ಯಂತ್ರಗಳನ್ನು ಬಳಸಿ ಶೋಧ ಕಾರ್ಯ ಮುಂದುವರಿಸಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಬುಧವಾರ ನಡೆದ ಕಾರ್ಯಾಚರಣೆ ಸಂದರ್ಭ ನಾಪತ್ತೆಯಾಗಿದ್ದವರ ಪೈಕಿ ಅಪ್ಪು ಅವರ ಮೃತದೇಹ ಪತ್ತೆಯಾಗಿದ್ದು, ಆ ಮೂಲಕ ಗುಡ್ಡ ಕುಸಿದು ಮೃತಪಟ್ಟ ಒಟ್ಟು ನಾಲ್ಕು ಮಂದಿಯ ಶವ ದೊರೆತಂತಾಗಿದೆ.

ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಅಪ್ಪು ಹಾಗೂ ಅವರ ಕುಟುಂಬ ಸದಸ್ಯರು ಗುಡ್ಡ ಕುಸಿತಕ್ಕೆ ಸಿಲುಕಿಕೊಂಡು ನಾಪತ್ತೆಯಾಗಿದ್ದರು. ಪ್ರಸ್ತುತ ಸ್ಥಳದಲ್ಲಿ ಮನೆ, ತೋಟದ ಯಾವುದೇ ಸುಳಿವಿಲ್ಲದಂತೆ ಗುಡ್ಡದ ಮಣ್ಣು ಆವರಿಸಿಕೊಂಡಿದೆ. ಅಪ್ಪು ಅವರ ಮೃತದೇಹ ಪತ್ತೆಯಾದ ಸ್ಥಳದ ಆಸುಪಾಸಿನಲ್ಲಿ ಮಂಗಳವಾರ ನಡೆದ ಕಾರ್ಯಾಚರಣೆ ಸಂದರ್ಭ ಹಂದಿಯೊಂದರ ಕಳೇಬರ ಪತ್ತೆಯಾಗಿತ್ತು.

ಇದೇ ಗ್ರಾಮದ ಪ್ರಭು ಅವರ ತಾಯಿ ದೇವಕಿ(65), ಮಕ್ಕಳಾದ ಅಮೃತಾ(13) ಹಾಗೂ ಆದಿತ್ಯ (10) ಹಾಗೂ ಹರೀಶ್ ಎಂಬವರ ಕುಟುಂಬದ ಸದಸ್ಯರಾದ ಶಂಕರ, ಲೀಲಾ ಹಾಗೂ ವೀಣಾ ಎಂಬವರು ನಾಪತ್ತೆಯಾಗಿದ್ದು, ಅವರ ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News