ಭಾರೀ ಮಳೆ ಸಾಧ್ಯತೆ: ಕೊಡಗಿನಲ್ಲಿ ಆ.15 ರ ವರೆಗೆ ರೆಡ್ ಅಲರ್ಟ್

Update: 2019-08-14 14:37 GMT

ಮಡಿಕೇರಿ, ಆ.14 : ಕೊನೆಗೂ ವರುಣನ ಕರುಣೆಯಿಂದ ಮಳೆ ಬಿಡುವು ನೀಡುತ್ತಿದೆ ಎಂದು ಪ್ರವಾಹ ಸಂಕಷ್ಟದಲ್ಲಿ ಸಿಲುಕಿರುವ ಕೊಡಗಿನ ಸಂತ್ರಸ್ತರು ನಿಟ್ಟುಸಿರು ಬಿಡುವ ಹಂತದಲ್ಲೇ ಮತ್ತೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿ ಆತಂಕ ಮೂಡಿಸಿದೆ.

ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಭಾರೀ ಮಳೆ ಹಾಗೂ ಆ.15ರ ಬೆಳಗಿನಿಂದ 16ರ ಬೆಳಗಿನವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆ.15ರ ಬೆಳಗಿನವರೆಗೆ ರೆಡ್ ಅಲರ್ಟ್ ಹಾಗೂ ನಂತರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಭಾರೀ ಮಳೆಯಿಂದಾಗಿ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಂಭವ ಇರುವುದರಿಂದ ಗುಡ್ಡಗಾಡು ಪ್ರದೇಶ ಮತ್ತು ಬೆಟ್ಟದ ತಪ್ಪಲಿನಲ್ಲಿ ವಾಸ ಮಾಡುವ ಜನರು ಜಾಗ್ರತೆಯಿಂದ ಇರುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಮತ್ತು ಕೆಲವು ಪ್ರದೇಶಗಳಲ್ಲಿ ಆದ ಭೂಕುಸಿತದಿಂದ ರಸ್ತೆ ಸಂಪರ್ಕಗಳು ಕಡಿತಗೊಂಡಿರುವುದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆಯೂ ಅವರು ಮನವಿ ಮಾಡಿದ್ದಾರೆ. ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿರುವ 24*7 ಕಂಟ್ರೋಲ್‍ರೂಂನ ದೂರವಾಣಿ ಸಂಖ್ಯೆ 08272-221077 ಹಾಗೂ ವಾಟ್ಸ್‍ಆಪ್ ಸಂಖ್ಯೆ 8550001077ನ್ನು ಸಂಪರ್ಕಿಸಬಹುದೆಂದು ಅವರು ಹೇಳಿದ್ದಾರೆ.

ಕಳೆದ ಸಾಲಿನಲ್ಲೂ ಆಗಸ್ಟ್ 14 ರಾತ್ರಿಯಿಂದ ಭಾರೀ ಮಳೆ ಆರಂಭಗೊಂಡು ನಂತರದ ದಿನಗಳಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಹಲವು ಭಾಗಗಳಲ್ಲಿ ಭಾರೀ ಭೂ ಕುಸಿತ ಉಂಟಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಉತ್ತಮ ಮಳೆ
ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 17.60ಮಿ.ಮೀ, ವೀರಾಜಪೇಟೆ ತಾಲೂಕಿನಲ್ಲಿ 5.65 ಮಿ.ಮೀ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 6.60 ಮಿ.ಮೀ ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 9.95ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನಾಂಕದಂದು 127.10 ಮಿ.ಮೀ.ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 12.60, ನಾಪೋಕ್ಲು 7.80, ಸಂಪಾಜೆ 23, ಭಾಗಮಂಡಲ 27, ವೀರಾಜಪೇಟೆ ಕಸಬಾ 10, ಹುದಿಕೇರಿ 4, ಶ್ರೀಮಂಗಲ 7.20, ಪೊನ್ನಂಪೇಟೆ 4.20, ಅಮ್ಮತ್ತಿ 4.50, ಬಾಳೆಲೆ 4, ಸೋಮವಾರಪೇಟೆ ಕಸಬಾ 5.60, ಶನಿವಾರಸಂತೆ 2.40, ಶಾಂತಳ್ಳಿ 7.40, ಕೊಡ್ಲಿಪೇಟೆ 18, ಕುಶಾಲನಗರ 4, ಸುಂಟಿಕೊಪ್ಪ 2.20 ಮಿ.ಮೀ. ಮಳೆಯಾಗಿದೆ.       

ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಪ್ರಸಕ್ತ ಜಲಾಶಯದ ನೀರಿನ ಮಟ್ಟವನ್ನು  2856.73 ಅಡಿಗಳಿಗೆ ಕಾಯ್ದಿರಿಸಿಕೊಂಡು ನದಿಗೆ 2200 ಹಾಗೂ ನಾಲೆಗೆ 1000ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಯದಲ್ಲಿ 2856.90 ಅಡಿ ನೀರಿತ್ತಲ್ಲದೆ, ನದಿಗೆ 22375ಹಾಗೂ ನಾಲೆಗೆ 1000ಕ್ಯುಸೆಕ್ ನೀರನ್ನು ಹೊರಬಿಡಲಾಗಿತ್ತು.
ಪ್ರಸಕ್ತ ಜಲಾಶಯಕ್ಕೆ   7077 ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಒಳಹರಿವು 22967 ಕ್ಯುಸೆಕ್‍ನಷ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News