ಶಿವಮೊಗ್ಗಕ್ಕೆ 50 ಕೋಟಿ ನೀಡಲು ಬಿಎಸ್‌ವೈ ನೋಟ್ ಪ್ರಿಂಟ್ ಮಾಡಿಕೊಂಡು ಹೋಗಿದ್ರಾ?: ಎಚ್.ಕೆ.ಪಾಟೀಲ್

Update: 2019-08-14 15:14 GMT

ಹಾವೇರಿ, ಆ.14: ಪ್ರವಾಹ ಸಂತ್ರಸ್ತರಿಗೆ ಕೇಳಿದ್ದಷ್ಟು ಪರಿಹಾರ ಧನ ನೀಡಲು ರಾಜ್ಯ ಸರಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ ಎಂದು ಹೇಳಿಕೆ ಕೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತಮ್ಮ ಶಿವಮೊಗ್ಗ ಜಿಲ್ಲೆಗೆ 50 ಕೋಟಿ ರೂ.ಅನುದಾನ ನೀಡಲು ನೋಟ್ ಪ್ರಿಂಟ್ ಮಾಡಿಕೊಂಡು ಹೋಗಿದ್ರಾ? ಎಂದು ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ಪ್ರಶ್ನಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಳಿ ಏನು ಕೇಳಿದರೂ ನನ್ನ ಹತ್ತಿರ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ ಎನ್ನುತ್ತಾರೆ. ನೆರೆ ಸಂತ್ರಸ್ತರು ಈ ಮಹಾಮಳೆಯ ಆರ್ಭಟಕ್ಕೆ ಕೇವಲ ತಮ್ಮ ಮನೆಗಳನ್ನು ಮಾತ್ರ ಕಳೆದುಕೊಂಡಿಲ್ಲ. ಬದಲಿಗೆ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ ಎಂದರು.

ಸಂತ್ರಸ್ತರ ಬದುಕನ್ನು ಮತ್ತೆ ಕಟ್ಟಿಕೊಡುವ ಕೆಲಸ ಸರಕಾರದಿಂದ ಆಗಬೇಕು. ಆದರೆ, ಸಂತ್ರಸ್ತರಿಗೆ ಅಗತ್ಯವಿರುವ ಪರಿಹಾರ ನೀಡುವಂತೆ ಕೋರಿದರೆ ನಮ್ಮ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ ಎಂದು ಮುಖ್ಯಮಂತ್ರಿ ಉತ್ತರಿಸುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಣೆ ಮಾಡಿ, ಈ ಪ್ರವಾಹ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಎದುರಿಸಲು ಕೇಂದ್ರ ಸರಕಾರ ಹೆಚ್ಚುವರಿ ಪರಿಹಾರವನ್ನು ಒದಗಿಸಬೇಕು ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದರು. ದಿಲ್ಲಿ, ಬೆಂಗಳೂರಿನಲ್ಲಿ ಕುಳಿತುಕೊಂಡು, ವೈಮಾನಿಕ ಸಮೀಕ್ಷೆಗಳನ್ನು ಮಾಡುವುದರಿಂದ ನೆರೆ ಹಾವಳಿಯ ಪೂರ್ಣ ಪ್ರಮಾಣದ ಚಿತ್ರಣ ಸಿಗುವುದಿಲ್ಲ. ಆದುದರಿಂದ, ನೆರೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಸರಕಾರ ಪ್ರತ್ಯೇಕವಾದ ಪ್ರಾಧಿಕಾರವನ್ನು ರಚಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News