ಆ.15ರಿಂದ ಸೆ.14ರವರೆಗೆ ಚಾರ್ಮಾಡಿ ಘಾಟ್ ಬಂದ್

Update: 2019-08-14 15:43 GMT

ಚಿಕ್ಕಮಗಳೂರು, ಆ.14: ಭಾರೀ ಮಳೆ, ಭೂಕುಸಿತದಿಂದಾಗಿ ಭಾರೀ ಪ್ರಮಾಣದಲ್ಲಿ ರಸ್ತೆ ಕುಸಿದಿರುವುದರಿಂದ ಜಿಲ್ಲೆಯಲ್ಲಿ ಹಾದು ಹೋಗಿರುವ ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಆ.15ರಿಂದ ಸೆ.14ರವರೆಗೆ ವಾಹನಗಳ ಸಂಚಾರವನ್ನು ನಿಷೇದಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟ್‍ನ ಜಿಲ್ಲಾ ವ್ಯಾಪ್ತಿಗೆ ಒಳಪಡುವ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ನಿಷೇಧಿಸಿ ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಪಡಿವ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಅಲ್ಲಿನ ಜಿಲ್ಲಾಧಿಕಾರಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಕಳೆದ 10 ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ನಿರಂತರ ಮಳೆಯಿಂದಾಗಿ ಜಿಲ್ಲಾ ವ್ಯಾಪ್ತಿಯ ವಿಲ್ಲುಪುರಂ-ಮಂಗಳೂರು ರಾ.ಹೆದ್ದಾರಿಯ ಅಲ್ಲಲ್ಲಿ ಭಾರೀ ಪ್ರಮಾಣದಲ್ಲಿ ರಸ್ತೆಯ ಮೇಲೆ ಭೂ ಕುಸಿತ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಆ.14ರವರೆಗೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಈ ಹಿಂದೆ ಆದೇಶ ಹೊರಡಿಸಿದ್ದರು. ಕಳೆದ ಮೂರು ದಿನಗಳ ಹಿಂದೆ ಚಾರ್ಮಾಡಿ ಘಾಟ್‍ನ ಕೆಲ ತಿರುವುಗಳಲ್ಲಿ ಹೆದ್ದಾರಿಯೇ ಕುಸಿದು ಹೋಗಿ ವಾಹನಗಳ ಸಂಚಾರವೇ ಸಾಧ್ಯವಿಲ್ಲದಂತಾಗಿದೆ. 

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 73 ರ ಕಿ.ಮೀ 86.200 ರಿಂದ ಕಿ.ಮೀ 99.200 ಕೊಟ್ಟಿಗೆಹಾರ ವ್ಯಾಪ್ತಿಯವರಗೆ ಆ.15 ರಿಂದ ಸೆಪ್ಟೆಂಬರ್ 14 ರ ವರಗೆಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಡಾ.ಬಗಾದಿ ಗೌತಮ್ ಆದೇಶಿಸಿರುತ್ತಾರೆ. ಬದಲಿ ಮಾರ್ಗವಾಗಿ ಮೂಡಿಗೆರೆ ಹ್ಯಾಂಡ್ ಪೋಸ್ಟ್-ಜನ್ನಾಪುರ-ಆನೆಮಹಲ್-ಶಿರಾಡಿ-ಗುಂಡ್ಯ (ರಾಹೆ-75) ಮುಖಾಂತರ ಸಂಚಾರಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News