ರೈತರಿಂದ ವಿಮಾ ಕಂತು ಭರಿಸಿಕೊಳ್ಳಲು ಕೇಂದ್ರ ಸಚಿವ ಸುರೇಶ್ ಅಂಗಡಿ ಸೂಚನೆ

Update: 2019-08-14 16:50 GMT

ಬೆಳಗಾವಿ, ಆ.14: ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅವಧಿಯನ್ನು ವಿಸ್ತರಣೆ ಮಾಡಲು ಕೇಂದ್ರ ಹಣಕಾಸು ಸಚಿವರು ಒಪ್ಪಿಗೆ ನೀಡಿದ್ದು, ಆ ಪ್ರಕಾರ ಬ್ಯಾಂಕುಗಳು ರೈತರಿಂದ ಕಂತು ಭರಿಸಿಕೊಳ್ಳಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.

ಬುಧವಾರ ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಬ್ಯಾಂಕುಗಳು ಹಾಗೂ ವಿಮಾ ಕಂಪೆನಿಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ವಿಮಾ ಪಾವತಿ ಅವಧಿಯನ್ನು ಆ.20ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ. ಆ ಪ್ರಕಾರ ಬ್ಯಾಂಕುಗಳು ಹಾಗೂ ಬೆಳೆವಿಮಾ ಕಂಪೆನಿಗಳು ರೈತರಿಂದ ಕಂತುಗಳನ್ನು ಭರಿಸಿಕೊಳ್ಳಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕರಿಗೆ ಅವರು ಸೂಚಿಸಿದರು.

ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವ ಸಂದರ್ಭದಲ್ಲಿ ಕಾಯ್ದೆ ಕಟ್ಟಳೆಗಳಿಗೆ ಕಟ್ಟು ಬೀಳದೆ ಮಾನವೀಯತೆ ಆಧಾರದ ಮೇಲೆ ಪ್ರಕರಣಗಳನ್ನು ಪರಿಗಣಿಸಬೇಕು. ಪ್ರವಾಹ ಹಾಗೂ ಮಳೆಯಿಂದಾಗಿ ಸಂಕಷ್ಟದಲ್ಲಿರುವ ರೈತರು, ನೇಕಾರರು, ಸಣ್ಣ ಕೈಗಾರಿಕಾ ಘಟಕಗಳು ಸೇರಿದಂತೆ ಯಾರೇ ಆಗಲಿ ವಿಮಾ ಪರಿಹಾರ ಕೋರಿದಾಗ ಆದಷ್ಟು ಬೇಗನೇ ಪರಿಹಾರ ಒದಗಿಸಬೇಕು ಎಂದು ಸುರೇಶ್ ಅಂಗಡಿ ಹೇಳಿದರು.

ಆ.31ರವರೆಗೆ ಅವಧಿ ವಿಸ್ತರಣೆಗೆ ಮನವಿ: ಅನೇಕ ಗ್ರಾಮಗಳು ಹಾಗೂ ಬ್ಯಾಂಕುಗಳು ಕೂಡ ಮುಳುಗಡೆಯಾಗಿದ್ದರಿಂದ ಬೆಳೆವಿಮೆ ಕಂತು ಪಾವತಿಸುವ ಅವಧಿಯನ್ನು ಆ.31ರವರೆಗೆ ವಿಸ್ತರಿಸಿದರೆ ಪ್ರವಾಹ ಬಾಧಿತ ಪ್ರದೇಶಗಳಲ್ಲಿನ ರೈತರು ಹಾಗೂ ಬ್ಯಾಂಕುಗಳಿಗೂ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದರು.

ವಿಸ್ತರಣೆ ಬಗ್ಗೆ ಸರಕಾರದಿಂದ ಇನ್ನೂ ಅಧಿಕೃತ ಆದೇಶ ಬಾರದಿರುವುದರಿಂದ ಬ್ಯಾಂಕುಗಳು ಗೊಂದಲದಲ್ಲಿವೆ. ಅದಾಗ್ಯೂ ಈ ಬಗ್ಗೆ ಸ್ಪಷ್ಟನೆ ಪಡೆಯುವುದಾಗಿ ತಿಳಿಸಿದರು. ಬಹುತೇಕ ಬ್ಯಾಂಕಿನ ಅಧಿಕಾರಿಗಳು ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ ಅಂಗಡಿ, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಬ್ಯಾಂಕುಗಳ ಅಭಿಪ್ರಾಯವನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು ಆ.31ರ ವರೆಗೆ ಅವಧಿ ವಿಸ್ತರಣೆಗೆ ಪ್ರಯತ್ನಿಸಲಾಗುವುದು ಎಂದರು.

ನೇಕಾರರು ಕೂಡ ಮಗ್ಗಗಳು ಮತ್ತು ಕಚ್ಚಾಸಾಮಗ್ರಿಗಳನ್ನು ಕಳೆದುಕೊಂಡು ಕಷ್ಟದಲ್ಲಿದ್ದಾರೆ ಅವರಿಗೆ ನೀಡಬೇಕಾದ ವಿಮಾ ಪರಿಹಾರಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಅದೇ ರೀತಿ ಸಣ್ಣ ಕೈಗಾರಿಕೆಗಳು, ರೈತರು ಖರೀದಿಸಿರುವ ಟ್ರ್ಯಾಕ್ಟರ್ ವಿಮೆಗಳನ್ನು ಕೂಡ ಪಾವತಿಸಬೇಕು ಎಂದರು.

ಪ್ರವಾಹಕ್ಕೆ ಸಿಲುಕಿ ಜೀವರಕ್ಷಣೆಗೆ ಮನೆಗಳನ್ನು ತೊರೆದಿರುವ ರೈತರು ಹಾಗೂ ಇತರರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್‌ಗಳನ್ನು ಕಳೆದುಕೊಂಡಿರುವುದರಿಂದ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಕೂಡ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು ಎಂದು ಅವರು ಹೇಳಿದರು.

ಮರುಪಾವತಿಗೆ ಒತ್ತಾಯಿಸದಂತೆ ಎಚ್ಚರಿಕೆ: ರೈತರು ಈಗಾಗಲೇ ಅನೇಕ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮರುಪಾವತಿಸುವಂತೆ ಯಾವುದೇ ಕಾರಣಕ್ಕೂ ಒತ್ತಾಯಿಸಬಾರದು ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.

ರೈತರು ಸೇರಿದಂತೆ ಇತರೆ ಸಾಲಗಾರರಿಂದ ಸ್ವಾಧೀನಪಡಿಸಿಕೊಂಡಿರುವ ಆಸ್ತಿಪಾಸ್ತಿಗಳ ಹರಾಜು ಮಾಡುವುದಾಗಲಿ ಅಥವಾ ಹೊಸದಾಗಿ ಸ್ವಾಧೀನಪಡಿಸಿ ಕೊಳ್ಳುವುದನ್ನು ಸದ್ಯಕ್ಕೆ ತಡೆ ಹಿಡಿಯಬೇಕು. ಪರಿಹಾರ ಚೆಕ್‌ಗಳನ್ನು ಖಾತೆ ಜಮೆ ಮಾಡುವ ರೀತಿಯಲ್ಲಿ ನೀಡಲಾಗಿದ್ದು, ಅಂತಹ ಚೆಕ್‌ಗಳನ್ನು ತಕ್ಷಣ ನಗದೀಕರಿಸುವಂತೆ ಬ್ಯಾಂಕುಗಳಿಗೆ ಅವರು ಸೂಚನೆ ನೀಡಿದರು.

ಒಂದು ವೇಳೆ ಯಾವುದೇ ರೀತಿಯ ವಿಮೆ ಅಥವಾ ಪರಿಹಾರ ಹಣವನ್ನು ಸಾಲ ಪಾವತಿಗೆ ತೆಗೆದುಕೊಂಡರೆ ಅಂತಹ ಬ್ಯಾಂಕುಗಳ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಗಳು ಪ್ರವಾಹದಲ್ಲಿ ಪಠ್ಯಪುಸ್ತಕ, ಆಧಾರ್ ಕಾರ್ಡ್, ಪಾಸ್ ಬುಕ್ ಮತ್ತಿತರ ದಾಖಲೆಗಳನ್ನು ಕಳೆದುಕೊಂಡಿದ್ದು, ಅವರ ವಿದ್ಯಾರ್ಥಿ ವೇತನ ಕೂಡ ಖಾತೆಗೆ ಜಮೆಯಾಗುವುದರಿಂದ ಅದನ್ನು ನಗದೀಕರಿಸಲು ಬ್ಯಾಂಕುಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪಎಚ್.ಬಿ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮಲಕ್ಷ್ಮಣ ಅರಸಿದ್ದಿ ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News