ಫೋನ್ ಕದ್ದಾಲಿಕೆ ಆರೋಪ ಪ್ರಕರಣ: ತನಿಖೆಯಿಂದ ಹಿಂದೆ ಸರಿದ ಅಧಿಕಾರಿ ?

Update: 2019-08-14 17:20 GMT
ಸಂದೀಪ್ ಪಾಟೀಲ್

ಬೆಂಗಳೂರು, ಆ.14: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧದ ಫೋನ್ ಕದ್ದಾಲಿಕೆ ಆರೋಪ ಪ್ರಕರಣದ ತನಿಖೆಯಿಂದ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಿಂದೆ ಸರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಹೀಗಾಗಿ, ಪ್ರಕರಣದ ತನಿಖೆ, ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಈ ತನಿಖೆಯಿಂದ ಮುಕ್ತಿಗೊಳಿಸುವಂತೆ ಸಂದೀಪ್ ಪಾಟೀಲ್ ಅವರು, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರಿಗೆ ಮನವಿ ಮಾಡಿರುವುದಾಗಿ ವರದಿಯಾಗಿದೆ.

ಏನಿದು ಪ್ರಕರಣ?: ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಕೆಎಸ್‌ಆರ್‌ಪಿಯ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ಅವರು, ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಲಾಬಿ ನಡೆಸಿದ್ದಾರೆ ಎಂಬ ಆಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿ ಸಹ ಪ್ರಕಟವಾಗಿತ್ತು. ಈ ಪ್ರಕರಣದ ಸಂಬಂಧ ತನಿಖೆ ನಡೆಸುವಂತೆ ಭಾಸ್ಕರ್ ರಾವ್ ಅವರು, ರಾಜ್ಯ ಪೊಲೀಸ್ ಮಹಾ ನಿದೇರ್ಶಕಿ ನೀಲಮಣಿ ರಾಜು.ಎನ್ ಅವರಿಗೆ ದೂರು ಸಲ್ಲಿಸಿದರು. ನೀಲಮಣಿ ರಾಜು ಅವರು, ತನಿಖೆ ನಡೆಸುವಂತೆ ಆದೇಶ ಹೊರಡಿಸಿದರು. ಇದರ ತನಿಖೆಯ ಜವಾಬ್ದಾರಿಯನ್ನು ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ವಹಿಸಲಾಗಿತ್ತು.

ರಾಜ್ಯ ರಾಜಕಾರಣದಲ್ಲೂ ಫೋನ್ ಕದ್ದಾಲಿಕೆ ಆರೋಪದ ಚರ್ಚೆಗಳು ಮುನ್ನಲೆಗೆ ಬಂದಿದ್ದು, 3 ಸಾವಿರಕ್ಕೂ ಅಧಿಕ ಮೊಬೈಲ್ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಬರೋಬ್ಬರಿ 34 ಜಿಬಿ ಡೆಟಾ ಆಡಿಯೊ ಶೇಖರಣೆ ಮಾಡಲಾಗಿರುವ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಮೈತ್ರಿ ಸರಕಾರ ಪತನ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಕರೆಗಳನ್ನು ಕದ್ದಾಲಿಸಲಾಗಿದೆ ಎನ್ನುವ ಗಂಭೀರ ಆರೋಪವೂ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News