ಪ್ರವಾಹದಲ್ಲಿ ಸಿಲುಕಿದ ಪ್ರತಿ ಸಂತ್ರಸ್ತ ಕುಟುಂಬಕ್ಕೆ 10 ಸಾವಿರ ಪರಿಹಾರ: ರಾಜ್ಯ ಸರಕಾರ ಆದೇಶ

Update: 2019-08-14 18:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.14: ರಾಜ್ಯದಲ್ಲಿ ಪ್ರವಾಹ ಪೀಡಿತವೆಂದು ಘೋಷಿಸಲ್ಪಟ್ಟ ಜಿಲ್ಲೆ, ತಾಲೂಕುಗಳಲ್ಲಿನ ಸಂತ್ರಸ್ತರ ಕುಟುಂಬವೊಂದಕ್ಕೆ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಹಾಗೂ ರಾಜ್ಯ ಸರಕಾರ ಸೇರಿ ಒಟ್ಟು 10 ಸಾವಿರ ರೂ.ಪರಿಹಾರ ನೀಡಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ. 

ಈ ಹೆಚ್ಚುವರಿ ಅನುದಾನವನ್ನು ಸರಕಾರದ ಅಧೀನ ಕಾರ್ಯದರ್ಶಿಗಳು, ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ಇವರು ಪೇಯಿಸ್ ರಸೀದಿ ಬಿಲ್‌ನಲ್ಲಿ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಡ್ರಾ ಮಾಡಿ ಡಿಸಿಗಳ ಪಿಡಿ ಖಾತೆಗಳಿಗೆ ಜಮಾ ಮಾಡಲಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ 3,800 ರೂ. ಹಾಗೂ ರಾಜ್ಯ ಸರಕಾರದಿಂದ 6,200 ರೂ.ಗಳನ್ನು ಒಟ್ಟು ಮಾಡಿ, ಒಂದು ಕುಟುಂಬಕ್ಕೆ 10,000 ರೂ. ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸಂಬಂಧಪಟ್ಟ ಜಿಲ್ಲೆಗಳ ಡಿಸಿಗಳು ಮಂಜೂರಾಗಿರುವ ಅನುದಾನದ ಹಾಗೂ ವೆಚ್ಚದ ಬಗ್ಗೆ ಕುಟುಂಬವಾರು ಲೆಕ್ಕವನ್ನು ಕಡ್ಡಾಯವಾಗಿ ನಿರ್ವಹಿಸಿ, ಇದಕ್ಕೆ ತಗುಲಿದ ವೆಚ್ಚದ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಲಿದೆ ಎಂದು ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ವಸಂತಕುಮಾರ್ ತಿಳಿಸಿದ್ದಾರೆ.

ಹಾಗೆಯೇ ಸಚಿವ ಸಂಪುಟದಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ರೈಲು ಮಾರ್ಗವನ್ನು 956 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು, ಶಿವಮೊಗ್ಗ ಕಿರು ವಿಮಾನ ಇಳಿದಾಣವನ್ನು ರಾಜ್ಯ ಸರಕಾರದ ಕೆ.ಎಸ್.ಐ.ಐ.ಡಿ.ಸಿ ಸಂಸ್ಥೆಯ ಮೂಲಕ 38 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ 66 ಸಂಖ್ಯೆಯ ಸಣ್ಣ ನೀರಾವರಿ/ ಜಿಲ್ಲಾ ಪಂಚಾಯತ್ ಕೆರೆಗಳನ್ನು ಮೂಡಿ ಗ್ರಾಮದ ಹತ್ತಿರ ವರದಾ ನದಿಯಿಂದ ನೀರನ್ನೆತ್ತಿ ತುಂಬಿಸುವ 285 ಕೋಟಿ ರೂ.ಗಳ ಮುಡಿ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News