ಬೆಳಗಾವಿಯಲ್ಲಿ 15,400 ಮನೆಗಳಿಗೆ ಭಾಗಶಃ ಹಾನಿ: ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ

Update: 2019-08-14 17:37 GMT

ಬೆಳಗಾವಿ, ಆ.14: ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಕಡಿಮೆಯಾಗಿದ್ದು ಪ್ರವಾಹ ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ಚಿಕ್ಕೋಡಿ, ಖಾನಾಪೂರ, ರಾಯಬಾಗ, ಹುಕ್ಕೇರಿ, ಮೂಡಲಗಿ, ಗೋಕಾಕ್, ಖಾನಾಪೂರ, ಬೆಳಗಾವಿ, ಮೂಡಲಗಿ, ಸವದತ್ತಿ, ಕಿತ್ತೂರು, ನಿಪ್ಪಾಣಿ ತಾಲೂಕುಗಳಲ್ಲಿ ಒಟ್ಟಾರೆ 374 ಗ್ರಾಮಗಳು ಪ್ರವಾಹದಿಂದ ಭಾದಿತವಾಗಿವೆ ಎಂದು ಅವರು ಹೇಳಿದ್ದಾರೆ. ಇದುವರೆಗೆ ಪ್ರವಾಹದಲ್ಲಿ 13 ಜನರು ಪ್ರಾಣವನ್ನು ಕಳೆದುಕೊಂಡಿದ್ದು, 4 ಜನರು ಕಾಣೆಯಾಗಿದ್ದಾರೆ, ಒಟ್ಟು 4,14,411 ಜನರು ಪ್ರವಾಹದಿಂದ ಭಾದಿತರಾಗಿದ್ದಾರೆ. ಧಾರಾಕಾರ ಮಳೆಯಿಂದಾಗಿ ಒಟ್ಟಾರೆಯಾಗಿ 15,400 ಮನೆಗಳು ಭಾಗಶಃ ಹಾನಿಗೆ ಒಳಗಾಗಿದ್ದು, 723 ಮನೆಗಳು ಸಂಪೂರ್ಣವಾಗಿ ಕುಸಿದಿವೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು 14 ತಾಲೂಕುಗಳಲ್ಲಿ 491 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 1,84,966 ಜನರು ಆಶ್ರಯ ಪಡೆದಿದ್ದಾರೆ. ಮಳೆಯಿಂದ ಜಿಲ್ಲೆಯಲ್ಲಿ ಒಟ್ಟು 1,57,301 ಹೇಕ್ಟರ್ ಬೆಳೆ ಹಾನಿಯಾಗಿದೆ. ಇಲ್ಲಿಯವರೆಗೆ ಮೂಲ ಸೌಕರ್ಯಗಳಾದ 2665 ಕಿ.ಮೀ ರಸ್ತೆಗಳು, 512 ಸೇತುವೆಗಳು ಮತ್ತು ಸಿಡಿ(ಚೆಕ್ ಡ್ಯಾಂ)ಗಳು, 3255 ಸರಕಾರಿ ಕಟ್ಟಡಗಳು, 338 ಟ್ಯಾಂಕ್‌ಗಳು, 40 ಏತ ನೀರಾವರಿ ಸೌಲಭ್ಯಗಳಿಗೆ ಧಕ್ಕೆಯಾಗಿದೆ. 286 ನೀರು ಸರಬರಾಜು ಮಾರ್ಗಗಳು, 5204 ವಿದ್ಯುತ್ ಕಂಬಗಳು ಕೂಡ ಹಾನಿಗೊಳಗಾಗಿವೆ ಎಂದು ಅವರು ಹೇಳಿದ್ದಾರೆ.

ಅಗ್ನಿಶಾಮಕ ದಳದ 95 ಸದಸ್ಯರು, ರಾಜ್ಯ ವಿಪತ್ತು ನಿರ್ವಹಣಾ ಪಡೆಯ 60 ಸದಸ್ಯರು, ಗೃಹ ರಕ್ಷಕ ದಳದ 50 ಜನರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 183 ಜನರು, ಸೇನೆಯ 899 ಜನರು, ಕರ್ನಾಟಕ ರಾಜ್ಯ ಮೀಸಲು ಪಡೆಯ 4 ತುಕುಡಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಬೊಮ್ಮನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News