ಪ್ರವಾಹ ಪೀಡಿತ ಪ್ರದೇಶದ ವಿದ್ಯಾರ್ಥಿಗಳಿಗೆ ವಿವಿಧ ಸವಲತ್ತು: ಉನ್ನತ ಶಿಕ್ಷಣ ಇಲಾಖೆ ಸೂಚನೆ

Update: 2019-08-14 17:55 GMT

ಬೆಂಗಳೂರು, ಆ.14: ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ವಿವಿಧ ಪ್ರದೇಶಗಳಲ್ಲಿ ಅಪಾರ ಪ್ರಮಾಣ ಹಾನಿ ಸಂಭವಿಸಿರುವುದರಿಂದ ಈ ಪ್ರದೇಶದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿಶ್ವವಿದ್ಯಾಲಯಗಳು ಮತ್ತು ಇಲಾಖೆಗಳು ಈ ಕೆಳಕಂಡ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣಕ್ಕಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಬಯಸಿದಲ್ಲಿ, ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿ ಹಾಜರಾತಿ, ಹಾಸ್ಟೆಲ್ ಸೌಲಭ್ಯ ಒದಗಿಸುವಂತೆ ಹಾಗೂ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಪಠ್ಯಕ್ರಮಗಳನ್ನು ಪೂರ್ಣಗೊಳಿಸಲು ಅಗತ್ಯಕ್ರಮಗಳನ್ನು ಕೈಗೊಳ್ಳುವುದು. ವಿದ್ಯಾರ್ಥಿಗಳು ನೀರುಪಾಲಾಗಿರಬಹುದಾದ ಶೈಕ್ಷಣಿಕ ಪ್ರಮಾಣ ಪತ್ರಗಳು, ಪುಸ್ತಕಗಳು, ಬ್ಯಾಗ್ ಇತ್ಯಾದಿ ಅಗತ್ಯ ವಸ್ತುಗಳನ್ನು ಅವರಿಗೆ ಉಚಿತವಾಗಿ ಒದಗಿಸಲು ಕ್ರಮ ಕೈಗೊಳ್ಳುವುದು.

ಪ್ರವಾಹ ಪೀಡಿತ ಭಾಗಗಳಲ್ಲಿರುವ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ನೋಡಿಕೊಂಡು ಸಂತ್ರಸ್ತರಿಗೆ ಹೆಚ್ಚಿನ ಆತ್ಮಸ್ಥೈರ್ಯ ತುಂಬಲು ಸಹಕಾರ ನೀಡುವುದು. ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿನ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಘಟಕಗಳ ಕ್ಯಾಂಪ್‌ಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಯೋಜಿಸಿ ಪ್ರವಾಹ ಪೀಡಿತ ಮತ್ತು ಹಾನಿಯಾಗಿರುವ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲು ಹಾಗೂ ಸಂತ್ರಸ್ತರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಗೂ ಜಿಲ್ಲಾಡಳಿತಗಳು ಕೈಗೊಳ್ಳುವ ಪುನರ್ವಸತಿ ಕಾರ್ಯಕ್ರಮಗಳನ್ನು ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡುವುದು.

ಪ್ರವಾಹ ಪೀಡಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ, ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳುವುದು. ವಿದ್ಯಾರ್ಥಿಗಳಿಗೆ ಉಂಟಾಗಿರಬಹುದಾದ ಅಘಾತದಿಂದ ಹೊರಬರುವಂತಾಗಲು ನಿಮ್ಹಾನ್ಸ್ ವತಿಯಿಂದ ನಡೆಸುತ್ತಿರುವ ಯುವ ಸ್ಪಂದನದ ಮೂಲಕ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡುವ ವ್ಯವಸ್ಥೆಗಳನ್ನು ಕಲ್ಪಿಸಿ ಅಲ್ಲಿಯ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದು.

ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ನೀಡುವಲ್ಲಿ ಮನೋಸ್ಥೈರ್ಯವನ್ನು ತುಂಬುವಲ್ಲಿ ಸ್ಥಳೀಯವಾಗಿ ಅಗತ್ಯವೆನ್ನಿಸಿದ ಕ್ರಮಗಳನ್ನು ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳು ಹಾಗೂ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಎನ್‌ಸಿಸಿ ನಿರ್ದೇಶನಾಲಯದಿಂದ ಕೈಗೊಳ್ಳುವುದು ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News