15ನೇ ವರ್ಷದಲ್ಲೇ ಜೈಲು ಸೇರಿದ್ದ ಧೀರೆ ಲೀಲಾಬಾಯಿ ಫಕ್ಕಿರಪ್ಪ ಇಂಗಳಕಿ

Update: 2019-08-14 18:22 GMT

ಮುಂಡಗೋಡ: ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗಳೊಸಲು ಹೋರಾಡಿದ ಅನೇಕ ಮಹನಿಯರ ಪೈಕಿ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ 93 ವರ್ಷ ಪ್ರಾಯದ ಲೀಲಾಬಾಯಿ ಫಕ್ಕಿರಪ್ಪ ಇಂಗಳಕಿ ಅವರೂ ಒಬ್ಬರು.

ತಮ್ಮ ಶಾಲಾ ದಿನಗಳಲ್ಲಿ ಒಬ್ಬ ಬಾಲಕಿ ದೇಶದ ಸ್ವಂತಂತ್ರ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದ ಲೀಲಾಬಾಯಿ, 1927ರ ಫೆಬ್ರವರಿ 6ರಂದು ಅವಿಭಜಿತ ಧಾರವಾಡ ಜಿಲ್ಲೆಯ ಗದಗ ತಾಲೂಕಿನ ಕದಡಿ ಗ್ರಾಮದ ಯಮನಪ್ಪ ಹಾಗೂ ಚಂದವ್ವ ಕದಡಿ ದಂಪತಿಯ ಮಗಳಾಗಿ ಜನಿಸಿದರು. ಹುಬ್ಬಳ್ಳಿಯ ಆಶ್ರಮ ಶಾಲೆಯಲ್ಲಿ 7ನೇ ತರಗತಿಯಲ್ಲಿದ್ದಾಗ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧುಮಕಿದರು. ಇವರಿಗೆ ಹಳ್ಳಿಕೇರಿ ಗುದ್ಲೇಪ್ಪ, ಮಹದೇವ ಮೈಲಾರಿ, ಕಲ್ಗೂದರಿ, ಸ್ವಾತಂತ್ರ ಹೋರಾಟಕ್ಕೆ ಪ್ರೇರಣೆಯಾಗಿದ್ದರು ಎಂದು ಅವರು ವಾರ್ತಾಭಾರತಿಯೊಂದಿಗೆ ತನ್ನ ಅನುಭವ ಹಂಚಿಕೊಂಡಿದ್ದಾರೆ.

1942ರ ಚಲೆಜಾವೊ ಚಳವಳಿಯಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದ ಅವರನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದ ಬ್ರಿಟಿಷರು 4-5 ದಿನ ಹಾಗೂ ಧಾರವಾಡದಲ್ಲಿ ಬಂಧಿಸಿ 8-10 ದಿನ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿದ್ದರು. ನಂತರ ಬೆಳಗಾವಿಯ ಹಿಂಡಲಾಗ ಜೈಲಿಗೆ ಸ್ಥಳಾಂತರಿಸಿದ್ದರು. ಸುಮಾರು 3 ತಿಂಗಳು ಹಿಂಡಲಾಗ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿ ನಂತರ ಇವರನ್ನು ಬಿಡುಗಡೆ ಮಾಡಲಾಯಿತು. ಆಗ ಲೀಲಾಬಾಯಿಯವರಿಗೆ ಕೇವಲ 15 ವರ್ಷ. ಬಿಡುಗಡೆ ಹೊಂದಿದ ನಂತರ ತಮ್ಮ ಮೆಟ್ರಿಕ್ ವಿದ್ಯಾಭ್ಯಾಸವನ್ನು ಪೂರ್ಣಗೊಳಸಿದರು.

1947ರಲ್ಲಿ ಭಾರತದ ಏರ್ ಫೋರ್ಸ್‌ನ ಉದ್ಯೋಗಿಯಾಗಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಇಂಗಳಕಿ ಗ್ರಾಮದ ಫಕ್ಕಿರಪ್ಪಇಂಗಳಕಿಯವರನ್ನು ವಿವಾಹವಾದ ಲೀಲಾಬಾಯಿ, ಒಂದು ಗಂಡು ಒಂದು ಹೆಣ್ಣುಮಗಳನ್ನು ಹೊಂದಿದ್ದರು. ಸದ್ಯ ಮಗಳು ಮಲೇಶಿಯಾದಲ್ಲಿದ್ದರೆ, ಮಗ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.

ಪತಿ ಫಕ್ಕಿರಪ್ಪ ನಿವೃತಿ ಹೊಂದಿದ ನಂತರ 1975ರಲ್ಲಿ ಮುಂಡಗೋಡ ತಾಲೂಕಿನ ಬಾಚಣಿಕಿ ಗ್ರಾಮದಲ್ಲಿ ಬಂದು ನೆಲೆಸಿರುವ ಇವರು, ಬಾಚಣಿಕೆ ಗ್ರಾಮದಲ್ಲಿ ವ್ಯವಸಾಯ ಮಾಡುತ್ತಾ ನಮ್ಮೆದಿಯ ಜೀವನ ಸಾಗಿಸುತ್ತಿದ್ದಾರೆ. 1983ರಲ್ಲಿ ಗಂಡನ ಸಾವಿನ ನಿಂದ ಧೃತಿಗೆಡದೆ ಮನೆಯ ಎಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು ಸಂಸಾರ ನಿಭಾಯಿಸಿದ ಗಟ್ಟಿಗಿತ್ತಿ ಲೀಲಾಬಾಯಿ.

ಜೈಲಿನಲ್ಲಿದ್ದಾಗ ಮಣಿಬೇನ್ ಪಟೇಲ್ ಉತ್ತರ ಭಾರತದ ಸಹರಾಬಾಯಿ, ಮೃದಲಾ ನಮ್ಮ ಶೆಲ್ಲಿನ ಪಕ್ಕದಲ್ಲಿಯೇ ಇದ್ದು, ನಮ್ಮ ಜೊತೆ ಮಾತನಾಡುತ್ತಿದ್ದರು. ಅಲ್ಲದೆ, ವೀರನ ಗೌಡಾ ಪಾಟೀಲ, ನಾಗಮಮ್ಮ ಪಾಟೀಲ ಮಾಗಡಿಯವರನ್ನು ಜೈಲು ವಾಸದ ವೇಳೆ ಪರಿಚಯವಾಗಿತ್ತು ಎಂದು ಲೀಲಾಬಾಯಿ ನೆನಪಿಸಿಕೊಂಡರು.

ಲೀಲಾಬಾಯಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೂ ಇವರಿಗೆ ಸರಕಾರದಿಂದ ಯಾವುದೇ ಜಮೀನು ಇತರೆ ಸೌಕರ್ಯಗಳು ಈ ವರೆಗೆ ಲಭಿಸಿಲ್ಲ. ಕೇವಲ ಸ್ವಾತಂತ್ರ ಹೋರಾಟಗಾರ್ತಿಯರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡುವ ಸಣ್ಣ ಮೊತ್ತದ ಪಿಂಚಣಿ ಹೊರತು ಪಡಿಸಿ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಅವಲತ್ತುಕೊಂಡಿರುವ ಅವರು, ಪ್ರತೀ ವರ್ಷದ ಸ್ವಾತಂತ್ರ ದಿನಾಚರಣೆಯ ಸಂದರ್ಭ ಸ್ಥಳೀಯ ಆಡಳಿತದ ಅಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸುತ್ತಾರೆ ಎಂದು ನೆನಪಿಸಿ ಕೊಂಡರು.

Writer - ನಝೀರುದ್ದೀನ್ ತಾಡಪತ್ರಿ

contributor

Editor - ನಝೀರುದ್ದೀನ್ ತಾಡಪತ್ರಿ

contributor

Similar News