ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ ಮದೀನಾ ಮಸೀದಿ: ಧರ್ಮಕ್ಕಿಂತ ಮಾನವೀಯತೆ ಮೇಲು- ಜಿಲ್ಲಾಧಿಕಾರಿ

Update: 2019-08-14 18:24 GMT

ಬೆಳಗಾವಿ, ಆ.14: ಮಾನವೀಯತೆಗೆ ಜಾತಿ-ಧರ್ಮ, ಭಾಷೆ ಸೇರಿದಂತೆ ಯಾವುದೇ ಅಡ್ಡಿಯಾಗಲ್ಲ ಎಂಬುದಕ್ಕೆ ಪ್ರವಾಹ ಸಂತ್ರಸ್ತರಿಗೆ ಜನರು ನೀಡಿದ ಉದಾರ ನೆರವು ಸಾಕ್ಷಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ನಗರದ ಕ್ಯಾಂಪ್ ಪ್ರದೇಶದ ಮದೀನಾ ಮಸೀದಿಗೆ ಬುಧವಾರ ಭೇಟಿ ನೀಡಿದ ಅವರು, ಮದೀನಾ ಮಸೀದಿ ವತಿಯಿಂದ ಪ್ರವಾಹ ಸಂತ್ರಸ್ತರಿಗಾಗಿ ಸಂಗ್ರಹಿಸಲಾಗಿರುವ ಪರಿಹಾರ ಸಾಮಗ್ರಿಗಳನ್ನು ವೀಕ್ಷಿಸಿದ ಬಳಿಕ ಮಾತನಾಡಿದರು.

ಮಸೀದಿಯ ಮೌಲಾನಾಗಳು ಸೇರಿದಂತೆ ಸಮಾಜದ ಮುಖಂಡರ ನೇತೃತ್ವದಲ್ಲಿ ಸಂತ್ರಸ್ತರ ನೆರವಿಗಾಗಿ ಮಾಡುತ್ತಿರುವ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಾನವೀಯತೆ ಧರ್ಮವನ್ನು ಮೀರಿದ್ದು, ಅದನ್ನು ಪ್ರವಾಹ ಸಂದರ್ಭದಲ್ಲಿ ತಾವು ಸಾಬೀತುಪಡಿಸಿದ್ದೀರಿ ಎಂದರು.

ಸರಕಾರ ಎಷ್ಟೇ ಸಹಾಯ-ಸೌಲಭ್ಯಗಳನ್ನು ನೀಡಿದ್ದರೂ ಅದು ಕೆಲವೊಮ್ಮೆ ಸಾಕಾಗಲ್ಲ. ಈ ಸಂದರ್ಭದಲ್ಲಿ ಸರಕಾರದ ಜತೆ ಕೈಜೋಡಿಸಿದ ತಮಗೆಲ್ಲರಿಗೂ ಧನ್ಯವಾದಗಳು. ಬಹಳಷ್ಟು ಜನರು ಶ್ರೀಮಂತರಿದ್ದಾರೆ. ಆದರೆ ಒಳ್ಳೆಯ ಕೆಲಸ ಮಾಡುವ ಅವಕಾಶಗಳು ಕಡಿಮೆ ಇರುತ್ತವೆ. ಅಂತಹ ಸಮಯ ಈಗ ಬಂದಿದೆ ಎಂದು ಅವರು ಹೇಳಿದರು.

ಮುಂಬರುವ ದಿನಗಳಲ್ಲಿ ಇದೇ ರೀತಿಯ ಸಹಾಯ ಸಹಕಾರ ಇರಲಿ. ದಾನಿಗಳು ನಿಮ್ಮನ್ನು ನಂಬಿ ಇಷ್ಟೊಂದು ಸಾಮಗ್ರಿಗಳನ್ನು ನೀಡಿದ್ದಾರೆ. ಅದನ್ನು ನಾವೆಲ್ಲರೂ ಸೇರಿ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡೋಣ ಎಂದು ಜಿಲ್ಲಾಧಿಕಾರಿ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಓ ಡಾ.ರಾಜೇಂದ್ರ, ಜಾತಿ-ಧರ್ಮದ ಗೋಡೆ ದಾಟಿ ತಾವೆಲ್ಲರೂ ಮಾನವೀಯತೆಯ ಸಹಾಯ ಹಸ್ತ ಚಾಚಿರುವುದು ದೇವರು ಮೆಚ್ಚುತ್ತಾನೆ ಎಂದರು.

ಪರಿಹಾರ ಕೇಂದ್ರಗಳಲ್ಲಿ ಬಡವರು, ಶ್ರೀಮಂತರು ಇದ್ದಾರೆ. ಎಲ್ಲರಿಗೂ ನೆರವಿನ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ಸಂತ್ರಸ್ತರ ಪುನರ್‌ವಸತಿಗೆ ಸೂಕ್ತ ಯೋಜನೆ ರೂಪಿಸಿ ತಮ್ಮ ನೆರವು ಪಡೆಯಲಾಗುವುದು ಎಂದು ಅವರು ಹೇಳಿದರು.

ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ಮಾತನಾಡಿ, ಮಸೀದಿ ವತಿಯಿಂದ ಒಳ್ಳೆಯ ಕೆಲಸ ಮಾಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಇಂತಹ ಕೆಲಸಗಳು ಪೂರಕವಾಗಿವೆ ಎಂದರು.

ದಲಿತ ಸಂಘಟನೆಯ ಮುಖಂಡ ಮಲ್ಲೇಶ ಚೌಗುಲೆ, ಉದ್ಯಮಿ ಜಹೀರ್ ಸಾಜನ್ ಹಾಗೂ ಶಬ್ಬೀರ್ ಸೇಠ್, ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್ ದುಡಗುಂಟಿ, ಮೌಲಾನಾ ಸಾಜಿದ್, ಸಲೀಂ ಸೇರಿದಂತೆ ನೂರಾರು ಮಂದಿ ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News