ಮಾಜಿ ಸಚಿವ ಎ.ಮಂಜು- ಅನರ್ಹ ಶಾಸಕ ಎಚ್.ವಿಶ್ವನಾಥ್ ಭೇಟಿ

Update: 2019-08-15 18:51 GMT

ಮೈಸೂರು,ಆ.15: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಚಿವ ಎ.ಮಂಜು ಮತ್ತು ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಉಭಯ ನಾಯಕರು ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು.
ವಿಶ್ವನಾಥ್ ಬಿಜೆಪಿಗೆ ಬರುವ ಕುರಿತು ಮತ್ತು ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಪಟ್ಟಂತೆ ಮಾತನಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಮಾಜಿ ಸಚಿವ ಜಿ.ಟಿ.ದೇವೇಗೌಡರ ಆಪ್ತ ನೂತನ ಮೈಮುಲ್ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಸಹ ಇಬ್ಬರೂ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಮಾಜಿ ಸಚಿವ ಜಿ.ಟಿ.ದೇವೇಗೌಡ ಸಹ ಬಿಜೆಪಿ ಕಡೆ ಒಲವು ತೋರಿಸುತ್ತಿದ್ದು ಮೈಸೂರು ಡೈರಿ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಈಗ ಅವರ ಆಪ್ತ ಮಾವಿನಹಳ್ಳಿ ಸಿದ್ದೇಗೌಡ ಈ ಇಬ್ಬರೂ ನಾಯಕರನ್ನು ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್, ನಾನು ಮತ್ತು ಎ.ಮಂಜು ಹಳೆಯ ಸ್ನೇಹಿತರು. ಅನಿರೀಕ್ಷಿತವಾಗಿ ನಾನು ಜಲದರ್ಶಿನಿ ಅತಿಥಿಗೃಹಕ್ಕೆ ಬಂದೆ. ಅವರು ಅಲ್ಲಿಗೆ ಬಂದರು. ಹಾಗಾಗಿ ಮಾತನಾಡಿದೆವು ಇದನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎಂದರು.

ಇದೇ ವೇಳೆ ನೂತನ ಮೈಮುಲ್ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ದೂರವಾಣಿ ಮೂಲಕ ನಿಮ್ಮನ್ನು ಭೇಟಿ ಮಾಡಬೇಕು ಎಲ್ಲಿದ್ದೀರಿ ಎಂದರು ನಾನು ಹುಣಸೂರಿಗೆ ಹೋಗುತ್ತಿದ್ದೇನೆ, ಜಲದರ್ಶಿನಿ ಅತಿಥಿಗೃಹದಲ್ಲಿ ಇದ್ದೇನೆ. ಬನ್ನಿ ಎಂದೆ ಹಾಗಾಗಿ ಅವರು ಬಂದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News