ವೀರಶೈವ-ಲಿಂಗಾಯತರನ್ನು ಪ್ರತ್ಯೇಕಿಸುವ ಪ್ರಯತ್ನಕ್ಕೆ ಯಾರೂ ಕಿವಿಗೊಡಬೇಡಿ: ಶಾಮನೂರು ಶಿವಶಂಕರಪ್ಪ

Update: 2019-08-16 14:24 GMT

ದಾವಣಗೆರೆ, ಆ.16: ವೀರಶೈವ-ಲಿಂಗಾಯತರನ್ನು ಪ್ರತ್ಯೇಕಿಸುವ ಪ್ರಯತ್ನಕ್ಕೆ ಯಾರು ಕಿವಿಗೊಡಬಾರದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದರು. 

ನಗರದ ಶ್ರೀಅಭಿನವ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಮಾತನಾಡಿದ ಅವರು, ನಮ್ಮನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಆದ್ದರಿಂದ ನಮ್ಮಲ್ಲಿರುವ ಒಳ ಪಂಗಡಗಳ ಭೇದ ಮರೆತು, ಒಳ ಪಂಗಡಗಳಲ್ಲಿಯೇ ಮದುವೆ ಮಾಡಿಕೊಳ್ಳುವ ಮೂಲಕ ನಮ್ಮ ಸಮಾಜದಲ್ಲಿ ಮೂಡುತ್ತಿರುವ ಒಡಕನ್ನು ಹೋಗಲಾಡಿಸಬೇಕೆಂದು ಕಿವಿಮಾತು ಹೇಳಿದರು. 

ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಮಾತನಾಡಿ, ವೀರಶೈವ-ಲಿಂಗಾಯತ ಬೇರೆ-ಬೇರೆ ಎಂಬ ರೋಗ ಬಂದಿತ್ತು. ಆದರೆ, ಬಳ್ಳಾರಿ ಬಂಡೆಯಷ್ಟೇ ಗಟ್ಟಿ ಆಗಿರುವ ದಾವಣಗೆರೆಯ ಶಾಮನೂರು ಶಿವಶಂಕರಪ್ಪನವರು ವೀರಶೈವ-ಲಿಂಗಾಯತರನ್ನೂ ಎಂದಿಗೂ ಬೇರೆ ಬೇರೆ ಮಾಡಲು ಬೀಡುವುದಿಲ್ಲ. ಅವೆರಡೂ ಒಂದೇ ಎಂಬುದಾಗಿ ಗಟ್ಟಿಯಾಗಿ ಪ್ರತಿಪಾದಿಸಿದ ಕಾರಣಕ್ಕೆ ಆ ರೋಗ ಈಗ ಕಡಿಮೆಯಾಗಿದ್ದು, ಇದು ಮುಂದೆ ಉಲ್ಬಣಿಸದಿರಲಿ ಎಂದು ಆಶಯ ವ್ಯಕ್ತಪಡಿಸಿದರು.  

ಹಿಂದೆ ನಾವು 2 ಕೋಟಿ ಜನಸಂಖ್ಯೆ ಇದೆ ಎಂಬುದಾಗಿ ಹೇಳುತ್ತಿದ್ದಾಗ, ಎಲ್ಲಿದ್ದೀರಿ ತೋರಿಸಿ ಎಂಬುದಾಗಿ ಸೂಚಿಸಿ ನೇಮಿಸಿದ್ದ ಚಿನ್ನಪ್ಪರೆಡ್ಡಿ ಕಮಿಷನ್ ಪ್ರಕಾರ ನಮ್ಮ ಜನಸಂಖ್ಯೆ 1.30 ಕೋಟಿ ಆಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರದ ಜಾತಿವಾರು ಜನಗಣತಿ ಪ್ರಕಾರ ನಮ್ಮ ಸಂಖ್ಯೆ ರಾಜ್ಯದಲ್ಲಿ 65 ಲಕ್ಷಕ್ಕೆ ಕುಸಿದಿದೆ. ಇದಕ್ಕೆ ಸರ್ಕಾರಕ್ಕೆ ದೂಷಣೆ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಇದರಲ್ಲಿ ನಮ್ಮವರ ತಪ್ಪು ಸಹ ಇದೆ ಎಂದು ವಿಮರ್ಷಿಸಿದರು. 

ನಮ್ಮವರು ಸೌಲಭ್ಯ ಸಿಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಜಾತಿವಾರು ಜನಗಣತಿಯ ಧರ್ಮದ ಕಾಲಂ ನಲ್ಲಿ ವೀರಶೈವ ಲಿಂಗಾಯತ ಎಂಬುದಾಗಿ ಬರೆಸಲಿಲ್ಲ. ಹೀಗೆ ಒಳ ಪಂಗಡಗಳ ಮಧ್ಯೆ ಅಂತರ ಹೆಚ್ಚಿಸುವ ಮೂಲಕ ಸರ್ಕಾರ ನಮಗೆ ಏನೂ ಸೌಲಭ್ಯ ಸಿಗದಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News