ಸಚಿವ ಸಂಪುಟ ರಚನೆ: ಸಿಎಂ ಯಡಿಯೂರಪ್ಪ-ಬಿ.ಎಲ್.ಸಂತೋಷ್ ಮಹತ್ವದ ಚರ್ಚೆ

Update: 2019-08-16 14:50 GMT

ಹೊಸದಿಲ್ಲಿ, ಆ.16: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿ ಈಗಾಗಲೇ 22 ದಿನಗಳಾಗಿದ್ದರೂ, ಈವರೆಗೆ ಸಚಿವ ಸಂಪುಟ ರಚನೆ ಮಾಡಲು ಸಾಧ್ಯವಾಗಿರಲಿಲ್ಲ. ಸಂಪುಟ ರಚನೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಶುಕ್ರವಾರ ಹೊಸದಿಲ್ಲಿಯಲ್ಲಿ ಮಹತ್ವದ ಚರ್ಚೆ ಮಾಡಿದ್ದಾರೆ.

ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದರ ಕುರಿತು ಉಭಯ ಮುಖಂಡರು ಚರ್ಚೆ ನಡೆಸಿ ಸಂಭಾವ್ಯ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಸಂಪುಟ ರಚನೆ ಕುರಿತು ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ.

ಸಚಿವ ಸಂಪುಟದಲ್ಲಿ ಜಾತಿ, ಜಿಲ್ಲಾವಾರು ಪ್ರಾತಿನಿಧ್ಯ ನೀಡಲು ಉದ್ದೇಶಿಸಲಾಗಿದ್ದು, ನಾಳೆಯೇ ಸಂಭಾವ್ಯ ಸಚಿವರ ಪಟ್ಟಿಗೆ ಅನುಮೋದನೆ ಹಾಗೂ ಖಾತೆಗಳ ಹಂಚಿಕೆ ಕುರಿತು ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅನರ್ಹ ಶಾಸಕರಿಗೆ ಸಂಬಂಧಪಟ್ಟ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ಎರಡು ಹಂತದಲ್ಲಿ ಸಚಿವ ಸಂಪುಟ ರಚಿಸಲು ಉದ್ದೇಶಿಸಲಾಗಿದ್ದು, ಮೊದಲ ಹಂತದಲ್ಲಿ 15 ರಿಂದ 18 ಮಂದಿ ಸಂಪುಟ ಸೇರುವ ಸಾಧ್ಯತೆಗಳಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಎರಡನೇ ಹಂತದಲ್ಲಿ ಮತ್ತಷ್ಟು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿಯಾಗಿರುವ ಜಗದೀಶ್ ಶೆಟ್ಟರ್‌ಗೆ ಸಚಿವ ಸ್ಥಾನ ಕೈ ತಪ್ಪುವ ಸಾಧ್ಯತೆಯಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದಲೂ ಸಂಪುಟ ಸೇರಲು ಪ್ರಯತ್ನಿಸುತ್ತಿರುವ ಜಗದೀಶ್ ಶೆಟ್ಟರ್‌ರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ಬಿಜೆಪಿ ಹೈಕಮಾಂಡ್ ಒಪ್ಪುತ್ತಿಲ್ಲ ಎಂದು ತಿಳಿದು ಬಂದಿದೆ.

ಒಮ್ಮೆ ಮುಖ್ಯಮಂತ್ರಿಯಾಗಿದ್ದವರು, ಮತ್ತೆ ಸಚಿವರಾಗುವುದು ಗೌರವದ ವಿಷಯವಲ್ಲ. ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡುವ ಮೂಲಕ ಅವರ ಮನವೊಲಿಸುವ ಪ್ರಯತ್ನವನ್ನು ಬಿಜೆಪಿ ಹೈಕಮಾಂಡ್ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲಾವಾರು ಸಂಭಾವ್ಯ ಸಚಿವರ ಪಟ್ಟಿ: ಬಸವರಾಜ ಬೊಮ್ಮಾಯಿ (ಹಾವೇರಿ), ಬಸನಗೌಡ ಪಾಟೀಲ್ ಯತ್ನಾಳ್(ವಿಜಯಪುರ), ಜೆ.ಸಿ.ಮಾಧುಸ್ವಾಮಿ (ತುಮಕೂರು), ಉಮೇಶ್ ಕತ್ತಿ(ಬೆಳಗಾವಿ), ಎಂ.ಪಿ.ರೇಣುಕಾಚಾರ್ಯ (ದಾವಣಗೆರೆ), ದತ್ತಾತ್ರೇಯ ಪಾಟೀಲ ರೇವೂರ(ಕಲಬುರ್ಗಿ), ಎಸ್.ಎ.ರಾಮದಾಸ್(ಮೈಸೂರು).

ಆರ್.ಅಶೋಕ್(ಬೆಂಗಳೂರು), ಡಾ.ಸಿ.ಎನ್.ಅಶ್ವಥ್‌ನಾರಾಯಣ (ಬೆಂಗಳೂರು), ಕೆ.ಜಿ.ಬೋಪಯ್ಯ(ಕೊಡಗು), ಕೆ.ಎಸ್.ಈಶ್ವರಪ್ಪ(ಶಿವಮೊಗ್ಗ), ಕೋಟಾ ಶ್ರೀನಿವಾಸ ಪೂಜಾರಿ(ಉಡುಪಿ), ಗೋವಿಂದ ಕಾರಜೋಳ (ಬಾಗಲಕೋಟೆ), ಎಸ್.ಅಂಗಾರ(ದಕ್ಷಿಣ ಕನ್ನಡ).

ಶ್ರೀರಾಮುಲು(ಚಿತ್ರದುರ್ಗ), ಕರುಣಾಕರ ರೆಡ್ಡಿ(ಬಳ್ಳಾರಿ), ಶಿವನಗೌಡ ನಾಯಕ(ರಾಯಚೂರು), ಪೂರ್ಣಿಮಾ ಕೆ.ಶ್ರೀನಿವಾಸ್(ಚಿತ್ರದುರ್ಗ) ಹಾಗೂ ಎಚ್.ಎನ್.ನಾಗೇಶ್(ಕೋಲಾರ) ಸಂಭಾವ್ಯ ಸಚಿವರ ಪಟ್ಟಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News