ಗ್ರಾಮಗಳ ಸ್ವಚ್ಛತೆ, ಸಂತ್ರಸ್ತರ ಪುನರ್ವಸತಿಗೆ ನಾವು ಸಿದ್ಧ: ಸಂಘ-ಸಂಸ್ಥೆಗಳ ಭರವಸೆ

Update: 2019-08-16 16:24 GMT

ಬೆಳಗಾವಿ, ಆ.16: ಇಡೀ ಜಿಲ್ಲೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರಿಂದ ಹತ್ತು ದಿನಗಳ ಕಾಲ ಜನರನ್ನು ರಕ್ಷಿಸಿ, ಸ್ಥಳಾಂತರಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಸ್ಥಳಾಂತರ ನಂತರ ಈಗ ಪುನರ್ವಸತಿ ಕಲ್ಪಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಶುಕ್ರವಾರ ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸರಕಾರೇತರ ಸಂಘ-ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕೆಲಸಕ್ಕೆ ಸಂಘ-ಸಂಸ್ಥೆಗಳ ನೆರವನ್ನು ಜಿಲ್ಲಾಡಳಿತ ಪಡೆದುಕೊಳ್ಳಲಿದೆ ಎಂದರು.

327 ಗ್ರಾಮಗಳ 4.14 ಲಕ್ಷ ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 497 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೆಲಸದಲ್ಲಿ ಸಾರ್ವಜನಿಕರು, ದಾನಿಗಳು, ಸಂಘ-ಸಂಸ್ಥೆಗಳು ಸರಕಾರದ ಜತೆ ಕೈಜೋಡಿಸುವ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಎಲ್ಲರಿಗೂ ಕೃತಜ್ಞತೆಗಳು ಎಂದು ಅವರು ತಿಳಿಸಿದರು.

ಪ್ರವಾಹದಿಂದ ಬಾಧಿತಗೊಂಡಿರುವ ಗ್ರಾಮಗಳನ್ನು ಸ್ವಚ್ಛಗೊಳಿಸಿ ಸಂತ್ರಸ್ತರನ್ನು ಗ್ರಾಮಕ್ಕೆ ಕಳಿಸಬೇಕಿದೆ. ಸಂಘ-ಸಂಸ್ಥೆಗಳಿಗೆ ಗ್ರಾಮಗಳ ಪಟ್ಟಿ ನೀಡಲಾಗುವುದು. ಸ್ವಚ್ಛತೆಗೆ ಅಗತ್ಯವಿರುವ ಸಲಕರಣೆಗಳನ್ನು ಒದಗಿಸಲಾಗುವುದು. ಇವುಗಳನ್ನು ಬಳಸಿಕೊಂಡು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟ ಹಾಗೂ ಸಂತ್ರಸ್ತರ ಪುನರ್ವಸತಿ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳ ಮೂಲಕ ಮುಂದೆ ಮಾಡಬೇಕಿರುವ ಕೆಲಸಗಳ ಬಗ್ಗೆ ಅಪರ ಪ್ರಾದೇಶಿಕ ಆಯುಕ್ತ ರಮೇಶ್ ಕಳಸದ ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್, ಸಂಘ-ಸಂಸ್ಥೆಗಳು ಹಾಗೂ ನೆರವು ನೀಡಲು ಮುಂದಾಗಿರುವ ದಾನಿಗಳು ಜಿಲ್ಲಾಡಳಿತದ ಸಮನ್ವಯತೆಯಿಂದ ಸಂತ್ರಸ್ತರ ಪುನರ್ವಸತಿಗೆ ಕೈಜೋಡಿಸಬೇಕು ಎಂದರು.

ಶಾಲಾ ಮಕ್ಕಳು ಪಠ್ಯಪುಸ್ತಕ, ಬ್ಯಾಗುಗಳನ್ನು ಕಳೆದುಕೊಂಡಿದ್ದಾರೆ. ಅಂತಹ ಮಕ್ಕಳಿಗೆ ಶೈಕ್ಷಣಿಕ ಕಿಟ್ ನೀಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಲು 700ಕ್ಕೂ ಅಧಿಕ ಕಾರ್ಯಕರ್ತರು ಸಿದ್ಧರಿದ್ದಾರೆ. ಬೆಳಗಾವಿ ಪ್ರಾಂತ ಸಮಾಜ ಸೇವಾ ಸಂಸ್ಥೆಯು ಸ್ವಚ್ಛತೆ, ಸಂತ್ರಸ್ತರಿಗೆ ಒಂದು ತಿಂಗಳು ರೇಷನ್ ಒದಗಿಸಲು ತೀರ್ಮಾನಿಸಿದ್ದು, ಖಾನಾಪುರ ಮತ್ತು ಚಿಕ್ಕೋಡಿ ತಾಲೂಕುಗಳ ಒಂದು ಸಾವಿರ ಕುಟುಂಬಗಳಿಗೆ ನಾವೇ ನೇರವಾಗಿ ಪರಿಹಾರ ತಲುಪಿಸಲಿದ್ದೇವೆ ಎಂದು ಫಾದರ್ ಪೀಟರ್ ಆಶೀರ್ವಾದ ತಿಳಿಸಿದರು.

ಜೀತೋ ಸಂಸ್ಥೆಯ ಅಮಿತ್ ಮಾತನಾಡಿ, ಜೀತೋ ಸಂಸ್ಥೆ ವತಿಯಿಂದ ಈಗಾಗಲೇ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದೇವೆ. ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ದಾನಿಗಳು ಕಳುಹಿಸುವ ಸಾಮಗ್ರಿಗಳನ್ನು ಮಹಾವೀರ ಭವನದಲ್ಲಿ ಸಂಗ್ರಹಿಸಲಾಗಿದ್ದು, ಆದ್ಯತೆಯ ಮೇರೆಗೆ ಸಂತ್ರಸ್ತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮದೀನಾ ಮಸೀದಿ ರಿಲೀಫ್ ಫೌಂಡೇಷನ್ ಸಲೀಂ ಮಾತನಾಡಿ, 40 ಟನ್ ಅಕ್ಕಿ ಹಾಗೂ 6 ಸಾವಿರ ಕುಡಿಯುವ ನೀರಿನ ಬಾಟಲ್‌ಗಳನ್ನು ಈಗಾಗಲೇ ವಿತರಿಸಿದ್ದೇವೆ. ದಾನಿಗಳು ನೀಡಿರುವ 25 ಸಾವಿರ ಬ್ಲಾಂಕೆಟ್ ಮತ್ತಿತರ ಬಗೆಯ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದರು.

ಬೆಳಗಾವಿ ನಗರ ಸೇರಿದಂತೆ ಗೋಕಾಕ ಮತ್ತಿತರ ತಾಲೂಕಿನ 50ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ನೆರವಾಗಿದ್ದೇವೆ. ಗ್ರಾಮಗಳ ಸ್ವಚ್ಛತೆಗೆ ಶ್ರಮದಾನ, ವೈದ್ಯಕೀಯ ಶಿಬಿರಗಳ ಆಯೋಜನೆ, ಔಷಧ ಸಾಮಗ್ರಿಗಳ ವಿತರಣೆ, ಆಹಾರ ಸಾಮಗ್ರಿ ವಿತರಣೆ, ಸ್ವಯಂಸೇವಕರನ್ನು ಒದಗಿಸುವುದು, ಶೌಚಾಲಯ ನಿರ್ಮಾಣ, ತ್ಯಾಜ್ಯ ವಿಲೇವಾರಿ, ನುರಿತ ಕೆಲಸಗಾರರನ್ನು ಒದಗಿಸುವುದಕ್ಕೆ ಸಿದ್ಧವಿ ರುವುದಾಗಿ ವಿವಿಧ ಸಂಘ-ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಭರವಸೆ ನೀಡಿದರು.

ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರಿದ್ದು, ಯಾವುದೇ ಸಂದರ್ಭದಲ್ಲೂ ಜಿಲ್ಲಾಡಳಿತ ನೀಡುವ ಕೆಲಸ ಮಾಡಲು ಸನ್ನದ್ಧರಾಗಿದ್ದೇವೆ ಎಂದು ಸಮಿತಿಯ ಫೈಝಲ್ ಪಠಾಣ್ ಭರವಸೆ ನೀಡಿದರು.

ಹಿಂದುಸ್ತಾನ ಬಂಗಾರದ ಗಿಣಿಯಂತಹ ದೇಶ. ಇದಕ್ಕೆ ಯಾವುದೇ ತೊಂದರೆಯಾಗದಂತೆ ರಕ್ಷಿಸಲು ನಾವು ಜಾತಿಧರ್ಮ ಭೇದವಿಲ್ಲದೇ ಕೈಜೋಡಿಸುತ್ತೇವೆ ಎಂದಾಗ ಎಲ್ಲರೂ ಒಕ್ಕೊರಲಿನಿಂದ ಭಾರತ ಮಾತಾ ಕೀ ಜೈ ಎಂದು ಘೋಷಣೆ ಹಾಕಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News