ದಾಖಲೆಗಳಿಲ್ಲವೆಂದು ಪ್ರವಾಹ ಸಂತ್ರಸ್ತರಿಗೆ ಸವಲತ್ತು ನಿರಾಕರಿಸಬೇಡಿ: ಕುರುಬೂರು ಶಾಂತಕುಮಾರ್

Update: 2019-08-16 16:43 GMT

ಹುಬ್ಬಳ್ಳಿ, ಆ. 16: ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ 50 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಷ್ಟ ಉಂಟಾಗಿದ್ದು, 17 ಜಿಲ್ಲೆಗಳ ನೂರು ತಾಲೂಕುಗಳ ಸಂಕಷ್ಟಕ್ಕೆ ಸಿಲುಕಿವೆ. ಕೇಂದ್ರ ಸರಕಾರ ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರಿ ಕೂಡಲೇ ನೆರೆ ಸಂತ್ರಸ್ತರ ನೆರವಿಗೆ ಹೆಚ್ಚಿನ ಅನುದಾನ ಕೊಡಿಸಬೇಕು ಎಂದು ಒತ್ತಾಯಿಸಿದರು.

ಪ್ರವಾಹದ ಪರಿಸ್ಥಿತಿ ಹಿನ್ನೆಲೆಯಲ್ಲಿ ಮನೆ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡಿರುವ ಜನರಿಗೆ ಯಾವುದೇ ಅಧಿಕೃತ ಕಾಗದ ಪತ್ರಗಳಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಸರಕಾರಿ ಸವಲತ್ತುಗಳನ್ನು ನಿರಾಕರಿಸಬಾರದು ಎಂದು ಅವರು ಒತ್ತಾಯಿಸಿದರು.

ಕೂಡಲೇ ರಾಜ್ಯ ಸರಕಾರ ತಹಶಿಲ್ದಾರ್ ಅಧ್ಯಕ್ಷತೆಯಲ್ಲಿ ವಿಶೇಷ ತಂಡ ರಚಿಸಿ, ಸ್ಥಳ ಪರಿಶೀಲನೆ ನಡೆಸಿ, ಸ್ಥಳದಲ್ಲೇ ದಾಖಲೆ ಪತ್ರಗಳನ್ನು ನೀಡಲು ಆದ್ಯತೆ ನೀಡಬೇಕು ಎಂದ ಅವರು, ರಾಜ್ಯದಲ್ಲಿ ಮಳೆ, ಪ್ರವಾಹದ ಹಾನಿಗೆ ಒಳಗಾಗಿರುವ ರೈತರ ಸಾಲಮನ್ನಾ ಮಾಡಬೇಕು ಎಂದು ಕೋರಿದರು.

ರೈತರು ಕೃಷಿ ಚಟುವಟಿಕೆ ಆರಂಭಿಸಲು ತುರ್ತಾಗಿ ಬ್ಯಾಂಕ್‌ಗಳ ಮೂಲಕ ಹೊಸ ಸಾಲವನ್ನು ಕೊಡಿಸಲು ಸರಕಾರ ಮುಂದಾಗಬೇಕು. ಬೆಳೆ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಭಿಕ್ಷೆ ರೂಪದಲ್ಲಿ ಪರಿಹಾರ ನೀಡುವ ಬದಲು ಹೆಚ್ಚಿನ ಪರಿಹಾರ ನೀಡಬೇಕು. ಕಬ್ಬು, ಬಾಳೆ ಸೇರಿದಂತೆ ಇತರೆ ಬೆಳೆಗಳನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ಸೇರಿಸಿ, ನಷ್ಟ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ಸಂತ್ರಸ್ತರ ಮನೆಗಳಲ್ಲಿ ಕಳ್ಳರು ಲೂಟಿ ಮಾಡುವ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಪೊಲೀಸರು ಅಗತ್ಯ ಕ್ರಮಕೈಗೊಳ್ಳಬೇಕು ಎಂದ ಅವರು, ಕಬ್ಬಿನ ಎಫ್‌ಆರ್‌ಪಿ ದರವನ್ನು ಕೇಂದ್ರ ಸರಕಾರ ಹಿಂದಿನ ವರ್ಷದ ದರವನ್ನೇ ನಿಗದಿ ಮಾಡಿ ರೈತರಿಗೆ ದ್ರೋಹ ಮಾಡಿದ್ದು, ಕೂಡಲೇ ಈ ದರವನ್ನು ಪರಿಷ್ಕರಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News