ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ್ದ ವೃದ್ಧನ ಶವ ಪತ್ತೆ

Update: 2019-08-16 16:45 GMT

ಚಿಕ್ಕಮಗಳೂರು, ಆ.16: ಭಾರೀ ಮಳೆಯಿಂದ ಇತ್ತೀಚೆಗೆ ಗುಡ್ಡಕುಸಿದು ಮಣ್ಣಿನಡಿಯಲ್ಲಿ ಸಿಲುಕಿದ್ದ ಮಧುಗುಂಡಿಯ ನಾಗಪ್ಪಗೌಡ (75) ಅವರ ಮೃತದೇಹ ಶುಕ್ರವಾರ ಮನೆಯ ಹಿಂಭಾಗದಲ್ಲಿ ಪತ್ತೆಯಾಗಿದೆ.

ಕಳೆದ ಒಂದು ವಾರದ ಹಿಂದೆ ಸುರಿದ ಭಾರೀ ಮಳೆಗೆ ಮೂಡಿಗೆರೆ ತಾಲೂಕಿನ ಮಧುಗುಂಡಿಯ ನಾಗಪ್ಪಗೌಡ (75) ಎಂಬುವರು ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಗುಡ್ಡ ಕುಸಿದು ಮಣ್ಣಿನಡಿಯಲ್ಲಿ ಸಿಲುಕಿದ್ದರು. ಭಾರೀ ಪ್ರಮಾಣದ ಗುಡ್ಡ ಕುಸಿದ ಪರಿಣಾಮ ಒಂದು ವಾರದಿಂದ ಜಿಲ್ಲಾಡಳಿತ, ಪೊಲೀಸ್ ಸಿಬ್ಬಂದಿ ತೀವ್ರಶೋಧ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ, ಶುಕ್ರವಾರ ಸಾರ್ವಜನಿಕರು ಮತ್ತು ಬಣಕಲ್, ಬಾಳೂರು ಪೊಲೀಸ್ ಸಿಬ್ಬಂದಿ ತೀವ್ರಶೋಧ ಕಾರ್ಯ ನಡೆಸಿದ ನಂತರ ಮೃತದೇಹ ಸಿಕ್ಕಿದೆ.

ಮಗ ಕರೆದನೆಂದು ಹೋಗಿ ಜೀವಬಿಟ್ಟ ನಾಗಪ್ಪಗೌಡ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಒಂದು ವಾರದಿಂದ ಸುರಿದ ಭಾರೀ ಮಳೆಗೆ ಅನೇಕ ಅನಾಹುತ ಸೃಷ್ಟಿಸಿದ್ದು, ಮಳೆಯಿಂದ ಮನೆ ಸುತ್ತ ಕಾಲುವೆ ತೋಡಿ ನೀರು ಬಿಡಿಸಲು ಮಗ ಹೋಗಿದ್ದಾನೆ. ಮನೆಯ ಹಿಂಬದಿ ಕಾಲುವೆ ತೋಡಿ ಮನೆಯ ಮುಂಭಾಗಕ್ಕೆ ಬರುವಾಗ ತಂದೆ ನಾಗಪ್ಪಗೌಡ ಅವರನ್ನು ಬರುವಂತೆ ಮಗ ಕರೆದಿದ್ದಾನೆ. ಮಗ ಕರೆದನೆಂದು ನಾಗಪ್ಪಗೌಡ ಮನೆಯ ಹಿಂಭಾಗಕ್ಕೆ ಹೋದ ಸಂದರ್ಭದಲ್ಲಿ ಗುಡ್ಡದ ಮಣ್ಣು ಮತ್ತು ಮರ ದಿಢೀರನೆ ಅವರ ಮೇಲೆ ಬಿದ್ದು ಮಣ್ಣಿನಡಿ ಸಿಲುಕಿದ್ದಾರೆ. ನಾಗಪ್ಪಗೌಡ ಅವರಿಗಾಗಿ ತೀವ್ರಶೋಧ ನಡೆಸಿದರೂ ಸಿಕ್ಕಿರಲಿಲ್ಲ, ಶುಕ್ರವಾರ ಮನೆಯವರ ಹೇಳಿಕೆ ಆಧರಿಸಿ ಮನೆಯ ಹಿಂಭಾಗ ಶೋಧಕಾರ್ಯ ನಡೆಸಿದಾಗ ಮೃತದೇಹ ಸಿಕ್ಕಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News