ಶೀಘ್ರವೇ ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ: ಪ್ರಧಾನಿ ಭರವಸೆ

Update: 2019-08-16 17:08 GMT

ಹೊಸದಿಲ್ಲಿ, ಆ.16: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ವಿವರಿಸಿ, ಪರಿಹಾರ ಕಾರ್ಯಗಳಿಗೆ ಶೀಘ್ರವೇ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. 

ರಾಜ್ಯದಲ್ಲಿ ಆ.3 ರಿಂದ 10ರವರೆಗೆ ವಾಡಿಕೆಗಿಂತ ಶೇ.279ರಷ್ಟು ಹೆಚ್ಚು ಮಳೆಯಾಗಿದೆ. ಕಳೆದ 118 ವರ್ಷಗಳಲ್ಲೇ ಇದು ದಾಖಲೆ ಮಳೆಯಾಗಿದೆ. ಮಹಾರಾಷ್ಟ್ರ ರಾಜ್ಯದಿಂದ ಪ್ರತಿ ದಿನ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ದಿನಕ್ಕೆ 6 ಲಕ್ಷ ಕ್ಯೂಸೆಕ್ಸ್‌ವರೆಗೆ ತಲುಪಿತ್ತು. ರಾಜ್ಯದಲ್ಲಿ 61 ಮಂದಿ ಸಾವನ್ನಪ್ಪಿದ್ದು, 15 ಮಂದಿ ನಾಪತ್ತೆಯಾಗಿದ್ದಾರೆ. 58,620 ಮನೆಗಳಿಗೆ ಹಾನಿಯಾಗಿದ್ದು, 4.7 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ. 18 ಸಾವಿರ ಕಿ.ಮೀ. ರಸ್ತೆ, 650 ಸೇತುವೆಗಳು, 54,000 ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರುಗಳಿಗೆ ತೀವ್ರ ಹಾನಿಯಾಗಿದೆ. 1224 ಪರಿಹಾರ ಕೇಂದ್ರಗಳನ್ನು ತೆರೆದು ಸುಮಾರು 4 ಲಕ್ಷ ಜನರಿಗೆ ಆಶ್ರಯ ನೀಡಲಾಗಿದೆ. ಅವರಿಗೆ ಆಹಾರ, ಕುಡಿಯುವ ನೀರು ಮತ್ತು ವೈದ್ಯಕೀಯ ನೆರವು ನೀಡಲಾಗಿದೆ.

ಪ್ರತಿ ಕುಟುಂಬಕ್ಕೆ ತಾತ್ಕಾಲಿಕ ಪರಿಹಾರವಾಗಿ 10 ಸಾವಿರ ರೂ., ಮನೆ ಹಾನಿಯಾದವರಿಗೆ ದುರಸ್ತಿಗೆ 1 ಲಕ್ಷ ರೂ. ಹಾಗೂ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೆರವು ನೀಡಲಾಗುತ್ತಿದೆ. ತೀವ್ರ ಹಾನಿಗೊಳಗಾಗಿರುವ 200 ಗ್ರಾಮಗಳನ್ನು ಸ್ಥಳಾಂತರಿಸಲು ಚಿಂತನೆ ನಡೆದಿದೆ. ಸಂಭವಿಸಿರುವ ಹಾನಿಯ ಮೊತ್ತ 40 ಸಾವಿರ ಕೋಟಿವರೆಗೆ ಇರಬಹುದು. ಈ ಮಾಹಿತಿಗಳನ್ನು ಪಡೆದ ಪ್ರಧಾನ ಮಂತ್ರಿಯವರು ನಷ್ಟದ ಅಂದಾಜು ಮಾಡಲು ಕೂಡಲೇ ಕೇಂದ್ರ ಅಧ್ಯಯನ ತಂಡವನ್ನು ಕಳುಹಿಸುವುದಾಗಿ ತಿಳಿಸಿದರು. ತಂಡದ ವರದಿ ಆಧರಿಸಿ, ಮಧ್ಯಂತರ ಪರಿಹಾರ ನೀಡುವ ಕುರಿತು ಹಾಗೂ ಪರಿಹಾರ ಮೊತ್ತದ ಕುರಿತು ತೀರ್ಮಾನಿಸುವುದಾಗಿ ತಿಳಿಸಿದರು. ನಾಗರಿಕ ವಿಮಾನಯಾನ ಸಚಿವರ ಭೇಟಿ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಸಿಎಂ ಯಡಿಯೂರಪ್ಪ ರಾಜ್ಯದ ವಿವಿಧ ಯೋಜನೆಗಳ ಕುರಿತು ಚರ್ಚಿಸಿದರು. 

ಈ ಸಂದರ್ಭದಲ್ಲಿ ಅವರು ಸರಕಾರಿ ಸ್ವಾಮ್ಯದ ವಿಮಾನ ನಿಲ್ದಾಣಗಳ ಅಭಿವೃದ್ಧಿ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದೊಂದಿಗೆ ಜಾಯಿಂಟ್ ವೆಂಚರ್ ಕಂಪೆನಿ ಸ್ಥಾಪನೆ ಕುರಿತಂತೆ, ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಚುರುಕುಗೊಳಿಸುವ ಕುರಿತು ಚರ್ಚಿಸಿದರು. ಹಾಗೂ ಕಾರ್ಯಾಚರಣೆಗೆ ಸಿದ್ಧವಾಗಿರುವ ಕಲಬುರಗಿ ವಿಮಾನ ನಿಲ್ದಾಣದ ಉದ್ಘಾಟನೆಗೆ ಆಗಮಿಸುವಂತೆ ಕೇಂದ್ರ ಸಚಿವರಿಗೆ ಆಹ್ವಾನಿಸಿ, ದಿನಾಂಕ ನಿಗದಿಪಡಿಸಲು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News