ಅತಿವೃಷ್ಟಿಗೆ ಶಿವಮೊಗ್ಗ ಗ್ರಾಮಾಂತರದಲ್ಲಿ 50 ಕೋಟಿ ರೂ.ಗಳಿಗೂ ಅಧಿಕ ನಷ್ಟ: ಶಾಸಕ ಕೆ.ಬಿ.ಅಶೋಕನಾಯ್ಕ್

Update: 2019-08-16 17:26 GMT

ಶಿವಮೊಗ್ಗ, ಆ.16: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ, ತುಂಗಾಭದ್ರಾ ನದಿಯ ಪ್ರವಾಹದಿಂದ ಸರಿಸುಮಾರು 50 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಆಸ್ತಿಪಾಸ್ತಿ ನಷ್ಟವಾಗಿದೆ. ಸಾವಿರ ಹೆಕ್ಟೇರ್ ಕೃಷಿ-ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ ಎಂದು ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ ತಿಳಿಸಿದ್ದಾರೆ. 

ಶುಕ್ರವಾರ ನಗರದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಅತೀವೃಷ್ಟಿ ಹಾನಿಯ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ನಷ್ಟಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖಾಧಿಕಾರಿಗಳು ಸಿದ್ದಪಡಿಸಿರುವ ಪ್ರಾಥಮಿಕ ಹಂತದ ಮಾಹಿತಿ ಅನುಸಾರ, 639 ಮನೆಗಳು ಧರಾಶಾಹಿಯಾಗಿವೆ. 16 ಕೋಟಿ ರೂ. ಮೊತ್ತದ ಪಿಡಬ್ಲ್ಯೂಡಿ ಇಲಾಖೆ ರಸ್ತೆಗಳಿಗೆ ಧಕ್ಕೆಯಾಗಿದೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ 6 ಕೋಟಿ ರೂ. ನಷ್ಟವಾಗಿದ್ದು, ರಸ್ತೆ, ಚರಂಡಿ, ಸೇತುವೆಗೆ ಹಾನಿಯಾಗಿದೆ. ಒಟ್ಟಾರೆ 85 ರಸ್ತೆಗಳು, 68 ಕೆರೆಕಟ್ಟೆಗಳು, 155 ಶಾಲೆ-ಅಂಗನವಾಡಿ ಕಟ್ಟಡಗಳಿಗೆ ಧಕ್ಕೆಯಾಗಿದೆ. ಇಬ್ಬರು ಮೃತಪಟ್ಟಿದ್ದಾರೆ. ಚೋರಡಿಯ ಕುಮದ್ವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ವ್ಯಕ್ತಿಗಳ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮುಳುಗು ತಜ್ಞರ ತಂಡದಿಂದಲೂ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ. 

ನಷ್ಟ ಅಂದಾಜಿನ ಸಮಗ್ರ ಮಾಹಿತಿ ಸಂಗ್ರಹಿಸಿದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಚರ್ಚಿಸಲಾಗುವುದು. ನೆರೆ ಹಾನಿಗೆ ಹೆಚ್ಚಿನ ಮೊತ್ತದ ಪರಿಹಾರ ಬಿಡುಗಡೆ ಮಾಡುವಂತೆ ಕೋರಿಕೊಳ್ಳಲಾಗುವುದು. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ, ಸದ್ಯ ಕ್ಷೇತ್ರಕ್ಕೆ 5 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು. 

ಇಓಗೆ ಸೂಚನೆ: ಕ್ಷೇತ್ರ ವ್ಯಾಪ್ತಿಯ ಬಿದರೆ ಗ್ರಾಮ ಪಂಚಾಯತ್ ನಲ್ಲಿ ಕರ ವಸೂಲಿಗಾರ ಹುದ್ದೆಗೆ ನಿಯೋಜನೆಗೊಂಡಿರುವ ಯುವತಿಗೆ, ಕಳೆದ ಆರು ತಿಂಗಳ ಹಿಂದಿನಿಂದ ವೇತನ ನೀಡಿಲ್ಲ. ಈ ಕುರಿತಂತೆ ತಮಗೆ ದೂರು ಬಂದಿದೆ. ಕಾಲಮಿತಿಯೊಳಗೆ ಯುವತಿಗೆ ವೇತನ ಬಿಡುಗಡೆ ಕ್ರಮಕೈಗೊಂಡು, ತಮಗೆ ವರದಿ ನೀಡಬೇಕು ಎಂದು ತಾಲೂಕು ಪಂಚಾಯತ್ ಇ.ಓ.ಗೆ ಸೂಚಿಸಲಾಗಿದೆ ಎಂದು ಇದೇ ವೇಳೆ ಶಾಸಕ ಕೆ.ಬಿ.ಅಶೋಕ ನಾಯ್ಕ್ ರವರು ತಿಳಿಸಿದ್ದಾರೆ. 

ಸಭೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಗೀತಾ ಜಯ ಶೇಖರ್, ಉಪಾಧ್ಯಕ್ಷೆ ನಿರ್ಮಲಾ ಮೋಹನ್, ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯರಾದ ಸೌಮ್ಯ ಭೋಜ್ಯನಾಯ್ಕ್, ತಮ್ಮಡಿಹಳ್ಳಿ ನಾಗರಾಜ್, ತಾ.ಪಂ. ಇ.ಓ. ಅತೀಕ್ ಪಾಷಾ ಸೇರಿದಂತೆ ಮೊದಲಾದವರಿದ್ದರು. 

ತಡೆಗೋಡೆ: 100 ಕೋಟಿ ರೂ. ಮಂಜೂರಿಗೆ ಮನವಿ
ತುಂಗಾಭದ್ರಾ ನದಿ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗುತ್ತಿದೆ. ಇದರಿಂದ ನದಿಪಾತ್ರದ 50 ಕ್ಕೂ ಅಧಿಕ ಗ್ರಾಮಗಳು ಜಲಾವೃತವಾಗುತ್ತಿವೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ಉಂಟಾಗುತ್ತಿದೆ. ಜನರು ಜೀವ ಭಯದಲ್ಲಿ ಜೀವನ ನಡೆಸುವಂತಹ ಸ್ಥಿತಿಯಿದೆ. ಕೆಲವೆಡೆ ಮನೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಜನರು ಮನೆಯಲ್ಲಿರಲು ಭಯವಪಡುವಂತಹ ಸ್ಥಿತಿಯಿದೆ ಎಂದು ಶಾಸಕ ಕೆ.ಬಿ.ಅಶೋಕನಾಯ್ಕ್ ತಿಳಿಸಿದ್ದಾರೆ. 

ಈ ಹಿನ್ನೆಲ್ಲೆಯಲ್ಲಿ ತುಂಗಾಭದ್ರಾ ನದಿಯಂಚಿನಲ್ಲಿ ಸುಮಾರು 15 ಕಿ.ಮೀ. ಉದ್ದದ ತಡೆಗೋಡೆ ನಿರ್ಮಾಣ ಮಾಡುವ ತುರ್ತು ಅಗತ್ಯವಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸರಿಸುಮಾರು 100 ಕೋಟಿ ರೂ. ಬೇಕಾಗುತ್ತದೆ. ತತ್‍ಕ್ಷಣವೇ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ, ತಡೆಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News