ಕೊಂಡಂಗೇರಿ: ನಿರಾಶ್ರಿತರಿಗೆ ಒಂದೂವರೆ ಎಕರೆ ಕಾಫಿ ತೋಟ ದಾನ ನೀಡಿದ ಅಬ್ದುಲ್ಲಾ ಹಾಜಿ

Update: 2019-08-17 10:29 GMT

ಸಿದ್ದಾಪುರ, ಆ.17: ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ ಕಾವೇರಿ ನದಿ ಹುಕ್ಕಿ ಹರಿದು ಕೊಂಡಂಗೇರಿ ಸುತ್ತಮುತ್ತಲ ಸಾವಿರಾರು ಮನೆಗಳು ಜಲಾವೃತಗೊಂಡು ನೂರಾರು ಮನೆಗಳು ಸಂಪೂರ್ಣ ಹಾನಿಯಾಗಿ ನೆಲಕಚ್ಚಿದ್ದು, ಸಂತ್ರಸ್ತರ ಸಮಸ್ಯೆಗಳನ್ನು ಮನಗಂಡು ಕೊಂಡಂಗೇರಿ ಗ್ರಾಮದ ಎಚ್.ಎಂ ಅಬ್ದುಲ್ಲಾ ಹಾಜಿ ತಮ್ಮ ಕಾಫಿ ತೋಟದ ಒಂದೂವರೆ ಎಕರೆ ಜಾಗವನ್ನು ಸಂತ್ರಸ್ತರ ಮನೆ ನಿರ್ಮಾಣಕ್ಕೆ ಮಸೀದಿ ಕಮಿಟಿಯ ಮೂಲಕ ನೀಡಿದ್ದಾರೆ

ತಮ್ಮ ಕಾಫಿ ತೋಟದ ಜಾಗವನ್ನು ಮನೆ ನಿರ್ಮಾಣ ಮಾಡಲು ನೀಡುವ ಮೂಲಕ ಮಾನವೀಯತೆ ಮೆರೆದಿರುವ ಇವರ ಕಾರ್ಯಕ್ಕೆ ಕೊಂಡಂಗೇರಿ ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ಪ್ರಮುಖರು ಅಭಿನಂದಿಸಿದ್ದಾರೆ. ಕಳೆದ ಬಾರಿ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರಕೃತಿ ದುರಂತ ಸಂದರ್ಭದಲ್ಲಿ ಸುಂಟಿಕೊಪ್ಪದ ಜಿಲ್ಲಾ ಪಂಚಾಯತ್ ಸದಸ್ಯ ಅಬ್ದುಲ್ ಲತೀಫ್ ತಮ್ಮ ಕಾಫಿ ತೋಟದ ಜಾಗದಲ್ಲಿ ಎರಡು ಎಕರೆ ಜಾಗ ನೀಡಿ ಮಾನವೀಯತೆ ಮೆರೆದಿದ್ದರು.

ಅಬ್ದುಲ್ ಹಾಜಿ ಪತ್ರಿಕೆಯೊಂದಿಗೆ ಮಾತನಾಡಿ, ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕಾಗಿದೆ. ಸಂತ್ರಸ್ತರು ಮನೆ ಆಸ್ತಿ ಕಳೆದುಕೊಂಡು ಕಂಗಾಲಾಗಿರುವ ಸಂದರ್ಭದಲ್ಲಿ ನಾವು ಅವರಿಗೆ ಸಹಾಯ ಮಾಡುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದರೆ ದೇವರು ನಮ್ಮನ್ನು ಮೆಚ್ಚುತ್ತಾನೆ ಎಂದರು.

ಪ್ರತಿಯೊಬ್ಬರು ದಾನಿಗಳು ಸಂತ್ರಸ್ತ ಕುಟುಂಬಗಳಿಗೆ ನೆರವಾದಲ್ಲಿ ಸಮಸ್ಯೆಗಳೆಲ್ಲವೂ ಬಗೆಹರಿಯಲಿದ್ದು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು. ಎಚ್.ಎಂ ಅಬ್ದುಲ್ಲಾ ಹಾಜಿ ಕೊಂಡಂಗೇರಿ ಎಸ್.ವೈ.ಎಸ್ ವಲಯ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನದಿ ಪ್ರವಾಹಕ್ಕೆ ತುತ್ತಾಗಿ ನೂರಾರು ಮನೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದವರಿಗೆ ಮನೆ ಕಟ್ಟಲು ಜಾಗ ನೀಡಿದ ಅಬ್ದುಲ್ಲಾ ಹಾಜಿ ಅವರಿಗೆ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ.
-ಯೂಸುಫ್ ಹಾಜಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News