ಧಾರಾಕಾರ ಮಳೆ: ಕೊಡಗಿನ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ

Update: 2019-08-16 17:48 GMT

ಮಡಿಕೇರಿ, ಆ.16: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗಳು ನೆಲಕಚ್ಚಿದ್ದು, ರೈತರು ಸಂಕಷ್ಟು ಅನುಭವಿಸುವಂತಾಗಿದೆ. ಮತ್ತೊಂದೆಡೆ ವಿವಿಧ ಮೂಲ ಸೌಲಭ್ಯಗಳ ಹಾನಿ, ಮನೆ ಕುಸಿತ ಮುಂತಾದವುಗಳಿಂದಲೂ ಅಪಾರ ಪ್ರಮಾಣ ಹಾನಿ ಸಂಭವಿಸಿದ್ದು, ಪ್ರಾಥಮಿಕ ವರದಿಯಂತೆ ಸುಮಾರು 579 ಕೋಟಿ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ಇದು ತುರ್ತಾಗಿ ನಡೆಸಿದ ಸಮೀಕ್ಷೆಯಾಗಿದ್ದು, ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಬೆಳೆಹಾನಿ ವಿವರ
ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ನಷ್ಟವಾಗಿದ್ದು ಕೃಷಿಕರಿಗೆ ಮಳೆ ಬರೆ ಎಳೆದಿದೆ. 3,623 ಹೆಕ್ಟೇರ್ ನಲ್ಲಿ ಭತ್ತದ ಬೆಳೆ ಕೊಚ್ಚಿ ಹೋಗಿ 4.52 ಕೋಟಿಯಷ್ಟು ನಷ್ಟವಾಗಿದೆ. 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ನಾಶವಾಗಿದ್ದು ಅಂದಾಜು   51.85 ಕೋಟಿ ನಷ್ಟವಾಗಿದೆ. 6,350 ಹೆಕ್ಟೇರ್ ಪ್ರದೇಶದಲ್ಲಿ ಕಾಳು ಮೆಣಸು ಬೆಳೆ ನೆಲಕಚ್ಚಿದ್ದು  66.65 ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಧಿಕೃತವಾಗಿ ಘೋಷಿಸಿದೆ.

ಅದೇ ರೀತಿ 40 ಹೆಕ್ಟೇರ್ ನಲ್ಲಿ ಜೋಳ, 1,579 ಹೆಕ್ಟೇರ್ ನಲ್ಲಿ ಅಡಿಕೆ, 904 ಹೆಕ್ಟೇರ್ ಶುಂಠಿ, 2,241 ಹೆಕ್ಟೇರ್ ನಲ್ಲಿ ಬಾಳೆ, 1,806 ಹೆಕ್ಟೇರ್ ಏಲಕ್ಕಿ, 380 ಹೆಕ್ಟೇರ್ ನಲ್ಲಿ ವಿವಿಧ ತರಕಾರಿ ಬೆಳೆ, 18 ಹೆಕ್ಟೇರ್ ನಲ್ಲಿ ಮಾಡಿದ್ದ ಮೀನುಗಾರಿಕೆ ಕೃಷಿಗೆ ಹಾನಿಯಾಗಿದ್ದು, ಅತಿವೃಷ್ಟಿಯಿಂದ ಒಟ್ಟು 1,18,975 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಗೀಡಾಗಿದ್ದು, ಒಟ್ಟು 266.52 ಕೋಟಿಯಷ್ಟು ಫಸಲು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ಅತಿವೃಷ್ಟಿಯಿಂದ ಉಂಟಾದ ಪ್ರವಾಹದಿಂದ ರಸ್ತೆ, ಸರ್ಕಾರಿ ಕಟ್ಟಡ, ಕೆರೆ ಹಾಗೂ ಮೋರಿಗಳಿಗೂ ಹಾನಿಯಾಗಿದ್ದು, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 81 ಕಾಮಗಾರಿ ಹಾನಿಯಾಗಿ 100.23 ಕೋಟಿ, ಗ್ರಾಮೀಣಾಭಿವೃದ್ಧಿ ಎಂಜಿನಿಯರಿಂಗ್ ವಿಭಾಗದ 786 ಕಾಮಗಾರಿಗೆ 95.78 ಕೋಟಿ, 75 ಅಂಗನವಾಡಿ ಕಟ್ಟಡ ಹಾನಿಗೆ 1.50 ಕೋಟಿ, 168 ಶಾಲಾ ಕಟ್ಟಡ ಹಾನಿಗೆ 2.52 ಕೋಟಿ, 14 ಆಸ್ಪತ್ರೆ ಕಟ್ಟಡಗಳಿಗೆ ಹಾನಿಯಾಗಿ 21 ಲಕ್ಷ,  ನೀರು ಪೂರೈಕೆ ಮತ್ತು ನೈರ್ಮಲ್ಯ ವಿಭಾಗದ 131 ಕಾಮಗಾರಿಗೆ 3.00 ಕೋಟಿ, ಸಣ್ಣ ನೀರಾವರಿ ಇಲಾಖೆ 27 ಕಾಮಗಾರಿಗೆ 6.75 ಕೋಟಿ, ಸೆಸ್ಕ್ ನ 1,467 ಕಾಮಗಾರಿಗೆ ಹಾನಿಯಾಗಿ 61.31 ಲಕ್ಷ,  ನಗರಾಭಿವೃದ್ಧಿ ಇಲಾಖೆಯ 223 ಕಾಮಗಾರಿಗೆ 33.05 ಕೋಟಿ, ಪಿಎಂಜಿಎಸ್‍ವೈನ 15 ಕಾಮಗಾರಿಗೆ 5.57 ಕೋಟಿ, ರಾಷ್ಟ್ರೀಯ ಹೆದ್ದಾರಿಯಲ್ಲಿ 32 ಸ್ಥಳಗಳಲ್ಲಿ ಭೂಕುಸಿತ ಮತ್ತಿತರ ಕಾಮಗಾರಿ ಹಾನಿಯಾಗಿ 58.84 ಕೋಟಿ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 1 ಕಾಮಗಾರಿಗೆ ಹಾನಿಯಾಗಿ 4.20 ಲಕ್ಷ ರೂ.ನಷ್ಟವಾಗಿರುವುದಾಗಿ ಅಂದಾಜು ಮಾಡಲಾಗಿದೆ.

ಒಟ್ಟಾರೆಯಾಗಿ ವಿವಿಧ ಇಲಾಖೆಗಳ 3,020 ಕಾಮಗಾರಿಗಳಿಗೆ ಹಾನಿಯಾಗಿದ್ದು, 305.91 ಕೋಟಿಯಷ್ಟು ನಷ್ಟವಾಗಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ.

549 ಮನೆಗಳಿಗೆ ಹಾನಿ
ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ 47 ಮನೆಗಳಿಗೆ ಹಾನಿಯಾಗಿ 30 ಲಕ್ಷ, ಸೋಮವಾರಪೇಟೆ ತಾಲೂಕಿನಲ್ಲಿ 340 ಮನೆಗಳಿಗೆ 3.10 ಕೋಟಿ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 162 ಮನೆಗಳು ಹಾನಿಯಾಗಿ 3.46 ಕೋಟಿ ಸೇರಿದಂತೆ ಒಟ್ಟು 549 ಮನೆಗಳಿಂದ ಒಟ್ಟು 6.86 ಕೋಟಿ ರೂ. ನಷ್ಟವಾಗಿರುವುದಾಗಿ ಹೇಳಲಾಗಿದೆ.

ಅತಿವೃಷ್ಟಿಯಿಂದ ಮೂರು ತಾಲೂಕಿನ 42 ಗ್ರಾಮ ಪಂಚಾಯತ್ ಗಳ 83 ಪ್ರದೇಶಗಳು ತೊಂದರೆಗೀಡಾಗಿದ್ದು, ಭೂಕುಸಿತ ಮತ್ತು ಪ್ರವಾಹದಿಂದಾಗಿ ಇನ್ನು ಕೂಡಾ ಮಡಿಕೇರಿ-ವೀರಾಜಪೇಟೆ ರಸ್ತೆ (ಲಘು ವಾಹನಗಳಿಗೆ ಸಂಚಾರಕ್ಕೆ ಅವಕಾಶವಿದೆ) ವೀರಾಜಪೇಟೆ-ಮಾಕುಟ್ಟ ರಸ್ತೆ  ಹಾಗೂ ಗಾಳಿಬೀಡು-ಪಾಟಿ-ಕಾಲೂರು ರಸ್ತೆ ಬಂದ್ ಆಗಿರುವುದಾಗಿ ಜಿಲ್ಲಾಡಳಿತ ಪ್ರಕಟನೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News