ಪಿಒಪಿ ಗಣೇಶ ಮೂರ್ತಿಗಳಿಗೆ ಕಡಿವಾಣ: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್

Update: 2019-08-16 17:57 GMT

ಬೆಂಗಳೂರು, ಆ.16: ನೆರೆ ರಾಜ್ಯಗಳ ಗಡಿಭಾಗಗಳಿಂದ ಬೆಂಗಳೂರು ನಗರ ಒಳಗೊಂಡಂತೆ ರಾಜ್ಯಕ್ಕೆ ಪಿಓಪಿ ಗಣೇಶ ಮೂರ್ತಿಗಳು ಪ್ರವೇಶಿಸದಂತೆ, ಸಾಗಾಣೆಗೆ ಕಡಿವಾಣ ಹಾಕಬೇಕೆಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಪುರಭವನದಲ್ಲಿ ಬಿಬಿಎಂಪಿ, ಬೆಸ್ಕಾಂ, ಕಂದಾಯ ಇಲಾಖೆ ಹಾಗೂ ನಗರ ಜಿಲ್ಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಪಿಓಪಿ ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕಿ ಮಣ್ಣಿನ ಗಣೇಶ ಮೂರ್ತಿಗಳನ್ನು ಆರಾಧಿಸುವಂತೆ ನಾಗರಿಕರಲ್ಲಿ ಜಾಗೃತಿ ಉಂಟು ಮಾಡಲಾಗುವುದು ಎಂದು ತಿಳಿಸಿದರು.

ಸಾರಿಗೆ ಬಸ್‌ಗಳಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಸಾಗಾಣೆ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಸಾರಿಗೆ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಲಾಗುವುದು. ಅಲ್ಲದೆ, ಬೆಂಗಳೂರು ನಗರದಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಇಡಲಾಗಿದ್ದ ಮಳಿಗೆಗಳ ಮೇಲೆ ದಾಳಿ ನಡೆಸಿ ಈವರೆಗೆ 168 ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಂಬಳಗೋಡಿನಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಸಂಗ್ರಹಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಜನತೆ ಮಣ್ಣಿನ ಗಣೇಶ ಮೂರ್ತಿಗಳನ್ನು ಖರೀದಿಸಬೇಕು ಎಂದು ನಿವಾಸಿಗಳು ಮತ್ತು ಸಂಘಸಂಸ್ಥೆಗಳ ಮುಖ್ಯಸ್ಥರಲ್ಲಿ ಸುಧಾಕರ್ ಅವರು ಮನವಿ ಮಾಡಿದರು. ಈ ವೇಳೆ ಬಿಬಿಎಂಪಿ ಘನತ್ಯಾಜ್ಯ ವಿಭಾಗಗಳ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಹಾಗೂ ಬೆಸ್ಕಾಂ, ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು

ನಗರದಲ್ಲಿ ಈ ಬಾರಿ 100ಕ್ಕೂ ಹೆಚ್ಚು ಮೊಬೈಲ್ ವಾಹನಗಳನ್ನು ಗಣೇಶ ಮೂರ್ತಿಗಳ ವಿಸರ್ಜನೆಗೆ ಎಲ್ಲಾ ವಾರ್ಡ್‌ಗಳಲ್ಲಿಯೂ ಇಡಲಾಗುವುದು. ಅಲ್ಲದೆ, 10 ವಾಹನಗಳನ್ನು ಸಿಂಗರಿಸಿ ನಾಡಿನ ಸಂಸ್ಕೃತಿ, ಗಣೇಶ ಹಬ್ಬದ ಪ್ರಾಮುಖ್ಯತೆ ಹಾಗೂ ಇತಿಹಾಸ ಸಾರುವಂತಹ ಸ್ತಬ್ಧ ಚಿತ್ರಗಳನ್ನು ನಗರದಲ್ಲೆಡೆ ಕೊಂಡೊಯ್ಯಲಾಗುವುದು.

-ಡಾ.ಕೆ.ಸುಧಾಕರ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News