ಕುಮದ್ವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಪ್ರಕರಣ: ಇನ್ನೂ ಪತ್ತೆಯಾಗಿಲ್ಲ ಇಬ್ಬರ ಸುಳಿವು

Update: 2019-08-16 18:10 GMT

ಶಿವಮೊಗ್ಗ, ಆ. 16: ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದ ಕುಮದ್ವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶೋಧ ಕಾರ್ಯಾಚರಣೆ ಶುಕ್ರವಾರ ಏಳನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇಲ್ಲಿಯವರೆಗೂ ನಾಪತ್ತೆಯಾದವರ ಸುಳಿವು ಲಭ್ಯವಾಗಿಲ್ಲವಾಗಿದೆ. 

ನದಿಯಲ್ಲಿ ಕೊಚ್ಚಿ ಹೋದವರ ಪತ್ತೆಗಾಗಿ, ಕಳೆದೊಂದು ವಾರದಿಂದ ಜಿಲ್ಲಾಡಳಿತವು ಅವಿರತ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಎನ್.ಡಿ.ಆರ್.ಎಫ್., ಅಗ್ನಿಶಾಮಕ ದಳ-ತುರ್ತು ಸೇವೆಯ 15 ಜನರ ತಂಡ, 50 ಜನರ ಸ್ಥಳೀಯರು, ಹರಿಹರದಿಂದ ಆಗಮಿಸಿದ್ದ 6 ಜನ ಈಜು ಹಾಗೂ ಮುಳುಗು ತಜ್ಞರ ತಂಡ, ಪೊಲೀಸ್ ಇಲಾಖೆಯ ಶ್ವಾನ ದಳ ತಂಡವನ್ನು ಬಳಸಿಕೊಂಡಿತ್ತು. ಜೊತೆಗೆ ರೆವಿನ್ಯೂ ಇಲಾಖೆಯ 5 ಜನ ಅಧಿಕಾರಿಗಳು ಹಾಗೂ ಸ್ಥಳೀಯ ಕುಂಸಿ ಠಾಣೆಯ ಪೊಲೀಸರನ್ನು ಮೇಲ್ವಿಚಾರಣೆಗೆ ನಿಯೋಜಿಸಿದೆ. ಸತತ ಶೋಧದ ಹೊರತಾಗಿಯೂ ಕೊಚ್ಚಿ ಹೋಗಿದ್ದ ಇಬ್ಬರ ಸುಳಿವು ಲಭ್ಯವಾಗಿಲ್ಲವಾಗಿದೆ. 

ಘಟನೆ ಹಿನ್ನೆಲೆ: ಕಳೆದ ಆ. 10 ರಂದು ಕುಂಸಿಯ ಕನಕನಗರದ ನಿವಾಸಿ ಅಮರನಾಥ (52), ಸನ್ನಿವಾಸ ಗ್ರಾಮದವರಾದ ಹರೀಶ್ (22), ರಾಮಪ್ಪ (48) ಹಾಗೂ ಕುಂಸಿಯ ನಾಗರಾಜ್ ಎಂಬುವರು ಚೋರಡಿಯ ಎನ್.ಹೆಚ್.206 ರ ಸೇತುವೆ ಮೇಲಿಂದ ತುಂಬಿ ಹರಿಯುತ್ತಿದ್ದ ಕುಮದ್ವತಿ ನದಿ ವೀಕ್ಷಿಸುತ್ತಿದ್ದರು. 
ಈ ವೇಳೆ ವೇಗವಾಗಿ ಆಗಮಿಸಿದ ಬೋಲೆರೋ ವಾಹನವು ಇವರಿಗೆ ಢಿಕ್ಕಿ ಹೊಡೆದಿತ್ತು. ಈ ವೇಳೆ ಅಮರನಾಥ, ಹರೀಶ್ ಹಾಗೂ ರಾಮಪ್ಪರವರು ನದಿಗೆ ಬಿದ್ದು ಕೊಚ್ಚಿ ಹೋಗಿದ್ದರು. ಉಳಿದಂತೆ ಸ್ಥಳೀಯರು ಕುಂಸಿಯ ನಾಗರಾಜ್‍ರವರನ್ನು ರಕ್ಷಿಸುವಲ್ಲಿ ಸಫಲರಾಗಿದ್ದರು. 

ಸುರಿಯುವ ಮಳೆಯಲ್ಲಿಯೇ ಕೊಚ್ಚಿ ಹೋದವರ ಶೋಧ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಆರಂಭಿಸಿತ್ತು. ಎನ್‍ಡಿಆರ್‍ಎಫ್ ತಂಡವನ್ನು ಬಳಸಿಕೊಂಡಿತ್ತು. ಇದರಲ್ಲಿ ರಾಮಪ್ಪರವರ ಶವ ಮರು ದಿನ ಪತ್ತೆಯಾಗಿತ್ತು. ಉಳಿದಿಬ್ಬರ ಸುಳಿವು ಲಭ್ಯವಾಗಿರಲಿಲ್ಲ. ಅಂದಿನಿಂದ ನಿರಂತರವಾಗಿ ಪತ್ತೆ ಕಾರ್ಯವನ್ನು ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News