ಇಂಡಿಯಾ -73: ಒಂದು ರಿಪೋರ್ಟ್ ಕಾರ್ಡ್

Update: 2019-08-16 18:21 GMT

ಭಾರತದಲ್ಲಿ 3,400 ಜನರ ಆಸ್ತಿಪಾಸ್ತಿಗಳು 350 ಕೋಟಿ ರೂ.ಗಳಿಗಿಂತ ಹೆಚ್ಚಾಗಿದ್ದರೂ ನಬಾರ್ಡ್ ಸಂಸ್ಥೆಯು 2018ರಲ್ಲಿ ನೀಡಿರುವ ಅಂಕಿಅಂಶದ ಪ್ರಕಾರ ಈ ದೇಶದ ಶೇ.75ರಷ್ಟು ಗ್ರಾಮೀಣ ರೈತಾಪಿಯ ಮಾಸಿಕ ಆದಾಯ 6,500 ರೂ.ಗಳಿಗಿಂತಲೂ ಕಡಿಮೆ ಇದೆ. ಹಾಗೆಯೇ Credit Sussie ಎಂಬ ಜಾಗತಿಕ ಶ್ರೇಯಾಂಕ ಸಂಸ್ಥೆಯ ಪ್ರಕಾರ ಈ ದೇಶದ ಶೇ.98ರಷ್ಟು ಜನರ ಆದಾಯ ಮತ್ತು ಸಂಪತ್ತು ಕಳೆದ ಹತ್ತುವರ್ಷಗಳಲ್ಲಿ ಶೇ.2ರ ಗತಿಯಲ್ಲಿ ಮಾತ್ರ ಹೆಚ್ಚಾದರೆ ಈ 3,400 ಜನರ ಸಂಪತ್ತು ಶೇ.600ರಷ್ಟು ವೇಗವಾಗಿ ಬೆಳೆದಿದೆ.


ಭಾರತಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾದವು. ಅಂದರೆ ಸ್ವಾತಂತ್ರ್ಯ ಬಂದ ನಂತದ ನಾಲ್ಕನೇ ತಲೆಮಾರು ಇಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದಾರೆ. ಭಾರತವು ಸ್ವಾತಂತ್ರ್ಯವನ್ನು ಗಳಿಸಿಕೊಂಡ ಕಾಲಘಟ್ಟದಲ್ಲೇ ಜಗತ್ತಿನ ಹಾಗೂ ಏಶ್ಯಾದ ನೂರಕ್ಕೂ ಹೆಚ್ಚು ದೇಶಗಳು ಬ್ರಿಟಿಷ್, ಫ್ರೆಂಚ್, ಬೆಲ್ಜಿಯಂ, ಜರ್ಮನ್, ಜಪಾನ್, ಪೋರ್ಚುಗಲ್, ಸ್ಪೇನ್ ಇನ್ನಿತರ ವಸಾಹತುಶಾಹಿಗಳಿಂದ ಮುಕ್ತವಾಗಿ ರಾಜಕೀಯವಾಗಿ ಸ್ವತಂತ್ರಗೊಂಡವು. ಆದರೆ ಆ ಎಲ್ಲಾ ದೇಶಗಳು ರಾಜಕೀಯವಾಗಿ ಒಂದಷ್ಟು ಸ್ವತಂತ್ರಗೊಂಡರೂ ಆರ್ಥಿಕವಾಗಿ ಸ್ವತಂತ್ರವಾದವೇ? ವಾಸ್ತವವಾಗಿ ವಸಾಹತೋತ್ತರ ಕಾಲದಲ್ಲಿ ಈ ಎಲ್ಲಾ ದೇಶಗಳು ಪರೋಕ್ಷ ರೀತಿಯ ನವ ವಸಾಹತುಶಾಹಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಸಾಹತೀಕರಣಕ್ಕೆ ಗುರಿಯಾದವು ಎಂಬುದಕ್ಕೆ ಭಾರತದ ಕಳೆದ 73 ವರ್ಷಗಳೂ ಸಾಕ್ಷಿ ಹೇಳುತ್ತವೆ.

ಆದರೂ ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶಗಳ ಸಾಲಿನಲ್ಲಿ ಭಾರತ, ಬ್ರೆಝಿಲ್ ಹಾಗೂ ಇತ್ತೀಚೆಗೆ ವರ್ಣಭೇದ ವಸಾಹತುಶಾಹಿಯಿಂದ ಮುಕ್ತವಾದ ದಕ್ಷಿಣ ಆಫ್ರಿಕದಂತಹ ದೇಶಗಳು ಬಾಂಗ್ಲಾ, ಘಾನಾ ಅಥವಾ ಗ್ವಾಟೆಮಾಲದಂತಹ ದೇಶಗಳಿಗಿಂತ ಭಿನ್ನವಾದ ವಸಾಹತೋತ್ತರ ಚರಿತ್ರೆಯನ್ನು ಹೊಂದಿವೆ. ಅದರಲ್ಲೂ ತುರ್ತುಸ್ಥಿತಿ ಅವಧಿಯನ್ನು ಹೊರತುಪಡಿಸಿ, ಭಾರತದಲ್ಲಿ ಚುನಾವಣೆಯಂತಹ ರಾಜಕೀಯ ಪ್ರಕ್ರಿಯೆಗಳು, ಬೇರೆಲ್ಲಾ ದೇಶಗಳಿಗಿಂತ ನಿರಂತರವಾಗಿ ನಡೆದಿವೆ. ಚುನಾವಣಾ ರಾಜಕಾರಣ ಇತರ ವಸಾಹತೋತ್ತರ ದೇಶಗಳಿಗಿಂತ ಭಾರತದಲ್ಲಿ ಇನ್ನಷ್ಟು ಆಳವಾಗಿ ಮತ್ತು ಗ್ರಾಮಮಟ್ಟದಲ್ಲಿ ಬೇರುಬಿಟ್ಟಿವೆ. ಈ ಕಾರಣಗಳಿಗಾಗಿಯೇ ಭಾರತವನ್ನು ಒಂದು ಯಶಸ್ವಿ ಪ್ರಜಾತಂತ್ರ ಎಂದು ಕರೆಯಲಾಗುತ್ತಿದೆ. ಹಾಗೂ ಅದರ ಜೊತೆ ಜೊತೆಗೆ ಇನ್ನಷ್ಟು ಸಾಧನೆಗಳ ಪಟ್ಟಿಯನ್ನು ಒದಗಿಸಲಾಗುತ್ತದೆ.

ಉದಾಹರಣೆಗೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ ವಾರ್ಷಿಕ ಬಜೆಟ್ ಅಂದಾಜು 350 ಕೋಟಿ ರೂ.ಗಳಿದ್ದರೆ ಇಂದು ಕೇಂದ್ರ ಸರಕಾರದ ವಾರ್ಷಿಕ ಬಜೆಟ್ಟೇ 28 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.

1950ರಲ್ಲಿ ಭಾರತದ ಜಿಡಿಪಿ-ಒಟ್ಟಾರೆ ರಾಷ್ಟ್ರೀಯ ಉತ್ಪನ್ನ -23,500 ಕೋಟಿ ರೂ. ಗಳಿಷ್ಟಿದ್ದರೆ ಇಂದು ಭಾರತದ ಜಿಡಿಪಿ 183 ಲಕ್ಷ ಕೋಟಿ ರೂ.ಗಳಾಗಿದ್ದು ಇನ್ನೈದು ವರ್ಷಗಳಲ್ಲಿ ಭಾರತದ ಜಿಡಿಪಿಯನ್ನು 5 ಟ್ರಿಲಿಯನ್ ಡಾಲರ್ (350 ಲಕ್ಷ ಕೋಟಿ ರೂ.)ಗೆ ಮುಟ್ಟಿಸಲಾಗುವುದು ಎಂದು ಮೋದಿ ಸರಕಾರ ಕೊಚ್ಚಿಕೊಂಡಿದೆ. ಇಂದಿನ ಭಾರತದ ಜಿಡಿಪಿಯ ಲೆಕ್ಕದಲ್ಲಿ ಭಾರತವು ಅಮೆರಿಕ, ಚೀನಾ, ಜಪಾನ್, ಜರ್ಮನಿಯನ್ನು ಬಿಟ್ಟರೆ ಆರನೇ ದೊಡ್ಡ ಆರ್ಥಿಕತೆಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ ಸೇನಾಶಕ್ತಿ ತುಂಬಾ ಶೋಚನೀಯವಾಗಿತ್ತು. ಆದರೆ ಇಂದು ಭಾರತದ ಸೈನ್ಯವು ಅಮೆರಿಕ, ಚೀನ, ಹಾಗೂ ರಶ್ಯಾಗಳನ್ನು ಬಿಟ್ಟರೆ 4ನೇ ಅತಿದೊಡ್ಡ ಸೈನಿಕ ಶಕ್ತಿಯಾಗಿದೆ ಹಾಗೂ ಅಣ್ವಸ್ತ್ರ ಹೊಂದಿರುವುದನ್ನೂ ಒಂದು ಸಾಧನೆಯನ್ನಾಗಿ ಪರಿಗಣಿಸುವುದಾದರೆ ಭಾರತವು ಹತ್ತು ಘೋಷಿತ ಅಣ್ವಸ್ತ್ರ ರಾಷ್ಟ್ರಗಳಲ್ಲಿ ಒಂದಾಗಿದೆ.

ಅಷ್ಟು ಮಾತ್ರವಲ್ಲದೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ ಹಲವಾರು ನಗರಗಳಲ್ಲೂ ಸರಿಯಾದ ಮೋಟಾರು ರಸ್ತೆ ಇರಲಿಲ್ಲ. ಇಂದು ಭಾರತದ ಚಂದ್ರಯಾನ ಹಾಗೂ ಮಂಗಳಯಾನಗಳನ್ನು ಮಾಡುತ್ತಿದೆ. ಅಷ್ಟು ಮಾತ್ರವಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಶತಕೋಟ್ಯಧಿಪತಿಗಳ ಸಂಖ್ಯೆ ಬೆರಳೆಣಿಕೆಯಷ್ಟೂ ಇರಲಿಲ್ಲ. ಆದರೆ ಕಳೆದ ಹತ್ತು ವರ್ಷಗಳಲ್ಲಿ 50 ಮಿಲಿಯನ್ ಡಾಲರ್ ಅಂದರೆ 350 ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಸಂಪತ್ತುಳ್ಳವರ ಸಂಖ್ಯೆ 3,400ಕ್ಕೆ ಮುಟ್ಟಿದೆ. ಆ ಲೆಕ್ಕದಲ್ಲೇ ಅಮೆರಿಕ, ಚೀನಾ, ಹಾಂಕಾಂಗ್, ರಶ್ಯದಂತಹ ದೇಶಗಳನ್ನು ಬಿಟ್ಟರೆ ಅತಿ ಹೆಚ್ಚು ಡಾಲರ್ ಶತಕೋಟ್ಯಧಿಪತಿಗಳನ್ನು ಹೊಂದಿರುವ ದೇಶ ಭಾರತವೇ ಆಗಿದೆ.

ಇವೆಲ್ಲವೂ ಹೌದು. ಆದರೆ ಉದಾರವಾದಿ ಪ್ರಜಾಪ್ರಭುತ್ವವೆಂದರೆ ಚುನಾವಣೆ ಮಾತ್ರವೇ? ಸ್ವಾತಂತ್ರ್ಯವೆಂದರೆ ಐದು ವರ್ಷಕ್ಕೊಮ್ಮೆ ಓಟು ಹಾಕುವ ಸ್ವಾತಂತ್ರ್ಯ ಮಾತ್ರವೇ? ಅಭಿವೃದ್ಧಿಯೆಂದರೆ ಜಿಡಿಪಿಯ ಅಥವಾ ಸೈನಿಕ ಶಕ್ತಿಯ ಅಥವಾ ಶತಕೋಟ್ಯಧಿಪತಿಗಳ ಅಭಿವೃದ್ಧಿ ಮಾತ್ರವೇ?

ವಾಸ್ತವವಾಗಿ ಒಂದು ದೇಶದ ಅಭಿವೃದ್ಧಿಯನ್ನು ಅಥವಾ ಸ್ವಾತಂತ್ರ್ಯವನ್ನು ಅಳೆಯುವ ಅಳತೆಗೋಲು ಕೇವಲ ಮೇಲ್ಕಂಡ ಅಂಶಗಳಲ್ಲ ಎಂಬುದನ್ನು ಇಂದು ವಿಶ್ವಸಂಸ್ಥೆಯಾದಿಯಾಗಿ ಎಲ್ಲಾ ದೇಶಗಳೂ ಇತ್ತೀಚೆಗೆ ಒಪ್ಪಿಕೊಳ್ಳುತ್ತಿವೆ. ದೇಶದ ಅಭಿವೃದ್ಧಿ ಎಂದರೆ ದೇಶದ ಜನರ ಅಭಿವೃದ್ಧಿ ಎಂದು ಒಪ್ಪಿಕೊಂಡು ಜನರ ಅಭಿವೃದ್ಧಿಯ ಮೌಲ್ಯಮಾಪನದಲ್ಲಿ ದೇಶಗಳ ಅಭಿವೃದ್ಧಿಯನ್ನು ಅಳೆಯುವ ಪದ್ಧತಿಯನ್ನು ಅಳವಡಿಸಲಾಗುತ್ತಿದೆ. ಪದ್ಧತಿಯು Human Development Index- HDI ‘ಮಾನವ ಅಭಿವೃದ್ಧಿ ಸೂಚ್ಯಂಕ’ ಎಂದು ಕರೆಯಲಾಗುತ್ತದೆ. ಇದರ ಪ್ರಕಾರ ದೇಶದ ಜಿಡಿಪಿಗಿಂತ ಆ ದೇಶದ ತಲಾವಾರು ವರಮಾನ ಏರಿಕೆ, ಶಾಲಾ ಶಿಕ್ಷಣ ಮತ್ತು ಆಯಸ್ಸುಗಳನ್ನು ಪರಿಗಣಿಸಲಾಗುತ್ತದೆ. ಜಿಡಿಪಿ ಲೆಕ್ಕದಲ್ಲಿ ಆರನೇ ಸ್ಥಾನದಲ್ಲಿರುವ ಭಾರತ ತನ್ನ ಜನರ ಅಭಿವೃದ್ಧಿ ಸೂಚ್ಯಂಕದಲ್ಲಿ ಮಾತ್ರ ಜಗತ್ತಿನ 189 ದೇಶಗಳಲ್ಲಿ 130ನೇ ಸ್ಥಾನದಲ್ಲಿದೆ. ಹಾಗೆಯೇ ಒಂದು ದೇಶದ ಅಭಿವೃದ್ಧಿಯನ್ನು ಆಯಾ ದೇಶಗಳ ಜನರು ಎಷ್ಟು ಆನಂದ ಮತ್ತು ಸಂತಸದಿಂದ ಇದ್ದಾರೆ ಎಂಬುದನ್ನು ಆಧರಿಸಿ ಅರ್ಥಮಾಡಿಕೊಳ್ಳಬೇಕೆಂಬ ತಿಳುವಳಿಕೆ 2012ರಿಂದ ಜಗತ್ತಿನಾದ್ಯಂತ ಹಬ್ಬಿದೆ.

ಹೀಗಾಗಿ ವಿಶ್ವ ಸಂಸ್ಥೆಯು ದೇಶಗಳ ಅಭಿವೃದ್ಧಿಯನ್ನು ಅಳೆಯಲು 2012ರಿಂದ World Happiness Index ‘ಆನಂದದ ಸೂಚ್ಯಂಕ’-ಎಂಬ ಹೊಸ ಮಾನದಂಡವನ್ನು ಅಳವಡಿಸುತ್ತಿದೆ. ಇದರಲ್ಲಿ ಒಬ್ಬ ವ್ಯಕ್ತಿಗೆ ತನ್ನ ಇಚ್ಛೆಗೆ ತಕ್ಕಂತೆ ಬದುಕನ್ನು ಆಯ್ಕೆ ಮಾಡಿಕೊಳ್ಳಲು ಇರುವ ಸ್ವಾತಂತ್ರ್ಯ, ಅದಕ್ಕೆ ಸರಕಾರ ಮತ್ತು ಸಮಾಜದಿಂದ ಸಿಗುವ ಬೆಂಬಲವೇ ಇನ್ನಿತ್ಯಾದಿಗಳನ್ನು ಮಾನದಂಡಗಳನ್ನಾಗಿ ಬಳಸಿಕೊಳ್ಳಲಾಗುತ್ತದೆ. ಈ ಮಾನದಂಡದಲ್ಲಿ ಜಗತ್ತಿನ 156 ದೇಶಗಳಲ್ಲಿ ಭಾರತವು 2016ರಲ್ಲಿ 122ನೇ ಸ್ಥಾನದಲ್ಲಿತ್ತು. ಈಗ 132ನೇ ಸ್ಥಾನಕ್ಕೆ ಕುಸಿದಿದೆ. ಕಾರಣಗಳು ಸ್ಪಷ್ಟ. ಅಲ್ಲವೇ?

ಒಂದು ದೇಶವು ನಿಜಕ್ಕೂ ಸ್ವತಂತ್ರವಾಗಿದೆಯೇ ಎಂದು ಪರಿಗಣಿಸಲು ಆ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ಕಾಪಾಡಲಾಗುತ್ತಿದೆ ಎಂಬ ಮಾನದಂಡವು ಅತಿ ಮುಖ್ಯ. ಅದರಲ್ಲೂ ಒಂದು ದೇಶದಲ್ಲಿ ಸಮಾಜದ ಮತ್ತು ಸರಕಾರದ ನೀತಿ ಮತ್ತು ಧೋರಣೆಗಳನ್ನು ಮುಕ್ತವಾಗಿ ಟೀಕಿಸುವ ಸ್ವಾತಂತ್ರ್ಯದ ಮಾನದಂಡಗಳು ಅರ್ಥಾತ್ ಪತ್ರಿಕಾ ಸ್ವಾತಂತ್ರ್ಯಗಳನ್ನು ಎಷ್ಟರ ಮಟ್ಟಿಗೆ ಪಾಲಿಸಲಾಗುತ್ತಿದೆ ಎನ್ನುವುದೇ ಒಂದು ದೇಶವು ನಿಜಕ್ಕೂ ಪ್ರಜಾತಾಂತ್ರಿಕವಾಗಿದೆಯೇ ಎಂಬುದನ್ನು ತೀರ್ಮಾನಿಸುತ್ತದೆ. ಇದನ್ನು ಅಳೆಯಲು ಜಗತ್ತಿನ ಮಾಧ್ಯಮ ಲೋಕದ ಸ್ವತಂತ್ರ ಮಾಧ್ಯಮ ಸಂಸ್ಥೆಯಾದ ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ ಎಂಬ ಸಂಸ್ಥೆಯು Press Freedom Index- ‘ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕ’ವನ್ನು ಬಳಸುತ್ತವೆ. ಅದರ ಪ್ರಕಾರ ಜಗತ್ತಿನ 150 ದೇಶಗಳಲ್ಲಿ ಭಾರತವು 2014ರಲ್ಲಿ 132ನೇ ಸ್ಥಾನದಲ್ಲಿತ್ತು. ಆದರೆ 2018ರಲ್ಲಿ ಭಾರತದ ಸ್ಥಾನ 138ಕ್ಕೆ ಕುಸಿದಿದೆ. ಸದಾ ಸಂಘರ್ಷದ ವಾತಾವರಣದಲ್ಲಿರುವ ಫೆಲೆಸ್ತೀನ್, ಇಸ್ರೇಲ್, ಶ್ರೀಲಂಕಾ ದೇಶಗಳೂ ಸಹ ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ. ಇದಕ್ಕೂ ಕೂಡಾ ಕಾರಣಗಳು ಸ್ಪಷ್ಟ.

ಇದರ ಜೊತೆಗೆ ಸ್ವೀಡನ್‌ನ ಗೊಥೆನ್‌ಬರ್ಗ್ ವಿಶ್ವವಿದ್ಯಾನಿಲಯದೊಂದಿಗೆ ಐರೋಪ್ಯ ಒಕ್ಕೂಟ, ಅಮೆರಿಕ ಸರಕಾರ ಮತ್ತು ವಿಶ್ವಬ್ಯಾಂಕ್‌ಗಳೆಲ್ಲವೂ ಸೇರಿಕೊಂಡು ಜಗತ್ತಿನ ಪ್ರಜಾತಂತ್ರದ ಆರೋಗ್ಯದ ಏರಿಳಿವುಗಳನ್ನು ಐತಿಹಾಸಿಕವಾಗಿ ಮೌಲ್ಯಮಾಪನ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿವೆ. ಇದಕ್ಕೆ ್ಖVarieties Of Democracy Projecy (v-Dem Project) ಎಂದು ಹೆಸರಿಡಲಾಗಿದೆ. ಇದರಡಿಯಲ್ಲಿ ಜಗತ್ತಿನ 196 ದೇಶಗಳಲ್ಲಿ 1901ರಿಂದ ಪ್ರಜಾತಾಂತ್ರಿಕ ಸಂಸ್ಥೆಗಳು ಮತ್ತು ಮೌಲ್ಯಗಳು ಯಾವ ರೀತಿ ಏರಿಳಿತಗಳನ್ನು ಕಾಣುತ್ತಿವೆಯೆಂದು ಪ್ರತಿವರ್ಷ ದಾಖಲಿಸಲಾಗುತ್ತದೆ. ಇದಕ್ಕಾಗಿ ಉದಾರವಾದಿ ಪ್ರಜಾತಂತ್ರಕ್ಕೆ ಸಂಬಂಧಿಸಿದ ಐದು ಮಾನದಂಡಗಳನ್ನು ಇಟ್ಟುಕೊಳ್ಳಲಾಗಿದೆ. ಚುನಾವಣಾ ಪ್ರಜಾತಂತ್ರದ ಸೂಚ್ಯಂಕ, ಉದಾರವಾದಿ ಮೌಲ್ಯಗಳ ಸೂಚ್ಯಂಕ, ಜನರ ಜೊತೆ ಸಮಾಲೋಚನಾ ಸೂಚ್ಯಂಕ, ಜನರ ಪಾಲುದಾರಿಕೆ ಸೂಚ್ಯಂಕ ಹಾಗೂ ಆದರ್ಶವಾದಿ ಸೂಚ್ಯಂಕ. ಸ್ಪಷ್ಟವಾಗಿ ಕಾಣುವಂತೆ ಇಲ್ಲಿ ಒಂದು ದೇಶವನ್ನು ಪ್ರಜಾತಾಂತ್ರಿಕ ದೇಶ ಎಂದು ಪರಿಗಣಿಸಲು ಕೇವಲ ಚುನಾವಣೆ ನಡೆಸುವುದನ್ನು ಮಾತ್ರ ಏಕೈಕ ಮಾನದಂಡವನ್ನಾಗಿ ಪರಿಗಣಿಸುವುದಿಲ್ಲ.

ಈ v-Dem ಮೌಲ್ಯಮಾಪನ ಮಾಡುತ್ತಿರುವ ಪರಿಣಿತರ ಪ್ರಕಾರ ಕಳೆದ ಐದು-ಹತ್ತು ವರ್ಷಗಳಿಂದ ಜಗತ್ತಿನಲ್ಲಿ ಪ್ರಜಾತಂತ್ರದ ವಿರುದ್ಧವಾಗಿ ಮೂರನೇ ಸರ್ವಾಧಿಕಾರಿ ಅಲೆಯು ಬೀಸುತ್ತಿದೆ. ಹೀಗಾಗಿಯೇ ಈ ಹಿಂದೆ ಪ್ರಜಾತಂತ್ರವಾಗಿದ್ದ 27 ರಾಷ್ಟ್ರಗಳಲ್ಲಿ ಬಲಪಂಥೀಯ ಮತ್ತು ಸರ್ವಾಧಿಕಾರಿ ಅಂಶಗಳು ಬಲವಾಗಿ ನೆಲೆಯೂರುತ್ತಿವೆ ಎಂಬ ಅಂಶವನ್ನು ಬಯಲುಪಡಿಸಿದ್ದಾರೆ. ಅದರ ಪ್ರಕಾರ ಟ್ರಂಪ್‌ನ ಅಮೆರಿಕವೂ ಒಳಗೊಂಡಂತೆ, ಬ್ರೆಝಿಲ್, ಹಂಗೆರಿ, ರಶ್ಯ, ಟರ್ಕಿ ಮತ್ತು ಏಶ್ಯಾದಲ್ಲಿ ಮೋದಿ ಸರಕಾರದಡಿಯಲ್ಲಿರುವ ಭಾರತದಲ್ಲಿ ಸರ್ವಾಧಿಕಾರಿ ಅಂಶಗಳು ತೀವ್ರವಾಗಿ ಹೆಚ್ಚಾಗುತ್ತಿವೆ ಎಂದು ಅವರು ಗುರುತಿಸುತ್ತಾರೆ! ಭಾರತವು ಚುನಾವಣಾ ಸೂಚ್ಯಂಕದಲ್ಲಿ 10ರಲ್ಲಿ 7ಕ್ಕಿಂತ ತುಸು ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದರೂ ಉಳಿದ ನಾಲ್ಕೂ ಸೂಚ್ಯಂಕಗಳಲ್ಲಿ 10ಕ್ಕೆ 2-3 ಅಂಕಗಳನ್ನು ಮಾತ್ರ ಪಡೆದುಕೊಂಡಿದೆ!

ಇವಲ್ಲದೆ ಭಾರತದಲ್ಲಿ 3,400 ಜನರ ಆಸ್ತಿಪಾಸ್ತಿಗಳು 350 ಕೋಟಿ ರೂ.ಗಳಿಗಿಂತ ಹೆಚ್ಚಾಗಿದ್ದರೂ ನಬಾರ್ಡ್ ಸಂಸ್ಥೆಯು 2018ರಲ್ಲಿ ನೀಡಿರುವ ಅಂಕಿಅಂಶದ ಪ್ರಕಾರ ಈ ದೇಶದ ಶೇ.75ರಷ್ಟು ಗ್ರಾಮೀಣ ರೈತಾಪಿಯ ಮಾಸಿಕ ಆದಾಯ 6,500 ರೂ.ಗಳಿಗಿಂತಲೂ ಕಡಿಮೆ ಇದೆ. ಹಾಗೆಯೇ Credit Sussie ಎಂಬ ಜಾಗತಿಕ ಶ್ರೇಯಾಂಕ ಸಂಸ್ಥೆಯ ಪ್ರಕಾರ ಈ ದೇಶದ ಶೇ.98ರಷ್ಟು ಜನರ ಆದಾಯ ಮತ್ತು ಸಂಪತ್ತು ಕಳೆದ ಹತ್ತುವರ್ಷಗಳಲ್ಲಿ ಶೇ.2ರ ಗತಿಯಲ್ಲಿ ಮಾತ್ರ ಹೆಚ್ಚಾದರೆ ಈ 3,400 ಜನರ ಸಂಪತ್ತು ಶೇ.600ರಷ್ಟು ವೇಗವಾಗಿ ಬೆಳೆದಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ ಸಂಪತ್ತುಗಳು ಅನುವಂಶಿಕವಾಗಿ ಹಸ್ತಾಂತರವಾಗುತ್ತಿರುವುದು, ಸಣ್ಣಪುಟ್ಟ ಉದ್ಯಮ ಮತ್ತು ವ್ಯವಹಾರಗಳನ್ನು ಕೊಂದು ದೊಡ್ಡದೊಡ್ದ ಏಕಸ್ವಾಮ್ಯ ಸಂಸ್ಥೆಗಳು ಬೆಳೆಯುತ್ತಿರುವುದು ಮತ್ತು ಸರಕಾರವೇ ಮುಂದೆ ನಿಂತು ತನ್ನ ಪ್ರೀತಿಪಾತ್ರ ಉದ್ದಿಮೆಗಳಿಗೆ ಸಾರ್ವಜನಿಕ ಸಂಪನ್ಮೂಲಗಳನ್ನು ಕೊಡಮಾಡುತ್ತಿರುವುದು ಎಂದು ಆ ಸಂಸ್ಥೆಯೇ ಗುರುತಿಸುತ್ತದೆ. ಎಲ್ಲಾ ಕಾರಣದಿಂದಾಗಿ OXFAM ಸಂಸ್ಥೆಯು ಗುರುತಿಸಿರುವಂತೆ ಈ ದೇಶದ ಶೇ.73ರಷ್ಟು ಸಂಪತ್ತು ಶೇ.1ರಷ್ಟು ಜನರ ಬಳಿ ಕೇಂದ್ರೀಕೃತವಾಗಿದೆ ಮತ್ತು ಈ ಕೇಂದ್ರೀಕರಣದ ವೇಗ ಮೋದಿಯುಗದಲ್ಲಿ ಕೋಮುವಾದದಷ್ಟೇ ವೇಗವಾಗಿ ಬೆಳೆಯುತ್ತಿದೆ.

 ಇದು ಭಾರತದ ಸ್ವಾತಂತ್ರ್ಯದ ಅಸಲೀ ರಿಪೋರ್ಟ್ ಕಾರ್ಡ್. ಹೀಗಾಗಿ ಭಾರತ ಪ್ರಗತಿಯಾಗುತ್ತಿದೆಯೇ? ಭಾರತವು ಯಶಸ್ವೀ ಪ್ರಜಾತಂತ್ರವೇ? ಎನ್ನುವುದೆಲ್ಲಾ ಅವರವರ ಭಾವಕ್ಕೆ... ಅವರವರ ಭಕುತಿಗೆ..ಬಿಟ್ಟಿದ್ದು.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News