ಅನೇಕತೆಯ ನಡುವೆ ಏಕದಂಡನಾಯಕ

Update: 2019-08-17 06:08 GMT

ಬ್ರಿಟಿಷರು ಭಾರತಕ್ಕೆ ಸ್ವಾತಂತ್ರವನ್ನು ಘೋಷಿಸಿದಾಗ ಭಾರತೀಯ ನಾಯಕರಿಗಿದ್ದ ಅತಿ ದೊಡ್ಡ ಆತಂಕ, ಭಾರತದ ಸೇನೆಯಾಗಿತ್ತು. ಸ್ವಾತಂತ್ರ ಘೋಷಣೆಯಾದ ಬೆನ್ನಿಗೆ ಸೇನೆ ಬಂಡಾಯವೆದ್ದು ಸರಕಾರವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಅಪಾಯವೊಂದಿತ್ತು. ಈ ಕುರಿತಂತೆ ವದಂತಿಗಳು ವ್ಯಾಪಕವಾಗಿ ಹರಡಿದ್ದವು. ಬ್ರಿಟಿಷರ ಕೈಕೆಳಗೆ ಸೇನಾ ಮುಖ್ಯಸ್ಥರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸೇರಿದಂತೆ ಹಲವು ಸೇನಾ ಮುಖಂಡರು, ಭಾರತದ ನಾಯಕರ ಜೊತೆಗೆ ಕೈ ಜೋಡಿಸಿ ಪ್ರಜಾಸತ್ತೆಯನ್ನು ಬಲಪಡಿಸುವುದಕ್ಕೆ ನೀಡಿದ ಕಾಣಿಕೆ ಸಣ್ಣದೇನೂ ಅಲ್ಲ. ಪಕ್ಕದ ಪಾಕಿಸ್ತಾನದಂತೆ ಭಾರತ ಇಂದು ಸೇನೆಯ ನಿಯಂತ್ರಣದಲ್ಲಿ ಇಲ್ಲದೇ ಇರುವುದಕ್ಕೆ ಜವಾಹರಲಾಲ್ ನೆಹರೂ ಸೇರಿದಂತೆ ಅಂದಿನ ನಾಯಕರು ಸೇನೆ ಕುರಿತಂತೆ ತೆಗೆದುಕೊಂಡ ದೂರದೃಷ್ಟಿಯ ನಿರ್ಧಾರಗಳು ಕಾರಣ. ವಿಶ್ವದ ಎರಡನೇ ಬೃಹತ್ ಪಡೆ ಹಾಗೂ ರಕ್ಷಣಾ ವ್ಯವಸ್ಥೆಗೆ ಮಾಡುವ ವೆಚ್ಚದ ನಿಟ್ಟಿನಲ್ಲಿ ವಿಶ್ವದ ನಾಲ್ಕನೇ ಬೃಹತ್ ರಕ್ಷಣಾ ಪಡೆ ಭಾರತದ್ದಾಗಿದ್ದರೂ ಅದು ಯಾವತ್ತೂ ದೇಶದ ಪ್ರಜಾಸತ್ತೆಗೆ ಸವಾಲಾಗಲಿಲ್ಲ. ಬದಲಿಗೆ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಾ ಬಂದಿದೆ.

ಭಾರತದ ಭೂ ಸೇನೆ, ಜಲ ಸೇನೆ ಮತ್ತು ವಾಯು ಸೇನೆಗಳ ವಿಂಗಡನೆ ಅವುಗಳು ಪ್ರತ್ಯೇಕವಾಗಿ ಹೊಂದಿರುವ ಸ್ವಾಯತ್ತ ಅಧಿಕಾರ ಇದಕ್ಕೆ ಮುಖ್ಯ ಕಾರಣ ಎನ್ನುವುದನ್ನೂ ನಾವು ಮರೆಯಲಾಗುವುದಿಲ್ಲ. ಭಾರತದ ಒಟ್ಟು ಸೇನೆಯನ್ನು ಯಾವತ್ತೂ ಒಬ್ಬ ಸೇನಾಧಿಕಾರಿಯ ಕೈಗೆ ದೇಶ ಒಪ್ಪಿಸುವ ಸಾಹಸ ಮಾಡಲಿಲ್ಲ. ಜೊತೆಗೆ ಭಾರತದ ಯಾವುದೇ ನಾಯಕರು ತಮ್ಮ ರಾಜಕೀಯ ದುರುದ್ದೇಶಗಳಿಗಾಗಿ ದೇಶದ ಸೇನೆಯಲ್ಲಿ ಹಸ್ತಕ್ಷೇಪ ನಡೆಸುವ ಸಾಹಸಕ್ಕೆ ಇಳಿಯಲಿಲ್ಲ. ಯಾವುದೇ ಪ್ರಧಾನಿ ತಮ್ಮ ಮೂಗಿನ ನೇರಕ್ಕೆ ನಿಯಂತ್ರಿಸುವ ಸಂರಚನೆ ನಮ್ಮ ಸೇನೆಯದ್ದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ, ರಾಜಕೀಯ ನಾಯಕರು ಸೇನೆಯೊಳಗೆ ನೇರ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಲೋಕಸಭಾ ಚುನಾವಣೆಯಲ್ಲಿ ವಿರೋಧಪಕ್ಷಗಳು ಈ ಬಗ್ಗೆ ಸಾರ್ವಜನಿಕವಾಗಿ ಆತಂಕಗಳನ್ನು ವ್ಯಕ್ತಪಡಿಸಿದ್ದವು. ರಾಜಕೀಯ ಸಿದ್ಧಾಂತಗಳಿಗೆ ಬದ್ಧವಾಗಿರುವ ಕೆಲವು ಶಕ್ತಿಗಳು ತಿಳಿದೋ ತಿಳಿಯದೆಯೋ ಸೇನೆಯೊಳಗೆ ನುಗ್ಗುವ ಪ್ರಯತ್ನ ನಡೆಸುತಿರುವ ಶಂಕೆಗಳು ದೇಶದಲ್ಲಿ ತೀವ್ರವಾಗುತ್ತಿವೆ. ಸೇನಾ ನೇಮಕಾತಿಗೆ ಆರೆಸ್ಸೆಸ್‌ನಿಂದ ತರಬೇತಿ ಶಾಲೆ ಘೋಷಣೆ ಇದರ ಭಾಗವೇ ಆಗಿದೆ.

ಸೇನೆಯೊಳಗೆ ಸಂಘಪರಿವಾರ ತನ್ನ ಸಿದ್ಧಾಂತವನ್ನು ತುರುಕಿಸುವ ಪ್ರಯತ್ನ ನಡೆಸುತ್ತಿದೆ ಮತ್ತು ಈ ಸಿದ್ಧಾಂತವನ್ನು ದೇಶದಲ್ಲಿ ಅನುಷ್ಠಾನಕ್ಕಿಳಿಸಲು ಪ್ರಯತ್ನಿಸುತ್ತಿರುವ ರಾಜಕೀಯ ಶಕ್ತಿಗಳು ಸೇನೆಯ ಮೇಲೆ ತನ್ನ ನಿಯಂತ್ರಣವನ್ನು ಬಯಸುತ್ತಿದೆ ಎಂಬ ಆರೋಪಗಳು ಇತ್ತೀಚಿನ ದಿನಗಳಲ್ಲಿ ಚರ್ಚೆಯ ವಿಷಯವಾಗಿವೆ. ಸ್ವಾತಂತ್ರೋತ್ಸವ ಭಾಷಣದಲ್ಲಿ ಸೇನಾ ಸುಧಾರಣೆಯ ಹೆಸರಿನಲ್ಲಿ, ಸೇನಾ ಪಡೆಗಳಿಗೆ ಏಕ ದಂಡನಾಯಕ ಘೋಷಣೆಯನ್ನು ನರೇಂದ್ರ ಮೋದಿ ಮಾಡಿರುವುದು ಈ ಕಾರಣಕ್ಕೆ ಮಹತ್ವವನ್ನು ಪಡೆದುಕೊಂಡಿದೆ. ನಿಜಕ್ಕೂ ಈ ಘೋಷಣೆ ಸೇನೆಯ ಸುಧಾರಣೆಯ ಮೇಲೆ ತನ್ನ ಪರಿಣಾಮವನ್ನು ಬೀರಬಹುದೇ? ಅಥವಾ ಇದು ರಾಜಕೀಯ ಹಿತಾಸಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆಯೇ? ಸೇನೆ ಸಮನ್ವಯದಿಂದ ಕಾರ್ಯ ನಿರ್ವಹಿಸುವುದು ದೇಶದ ಹಿತದೃಷ್ಟಿಯಿಂದ ಅಗತ್ಯವಾದ ಕಾರಣ ಮೂರೂ ಪಡೆಗಳು ಒಟ್ಟಿಗೆ ಮುಂದುವರಿಯಲು ಇದು ನೆರವಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಈಗ ದೇಶದ ಸೇನಾಪಡೆಗಳ ಸ್ವರೂಪವನ್ನು ಗಮನಿಸೋಣ. ಭಾರತದ ರಕ್ಷಣಾ ವ್ಯವಸ್ಥೆ ಇತರ ಬೃಹತ್ ಸೇನಾಪಡೆಗಳಂತಿಲ್ಲ. ಅಲ್ಲಿ ‘ಥಿಯೇಟರ್ ಕಮಾಂಡ್’ ಸ್ವರೂಪ(ಮೂರೂ ಪಡೆಗಳಿಗೆ ಏಕ ದಂಡನಾಯಕ) ವ್ಯವಸ್ಥೆಯಿದ್ದರೆ ಭಾರತವು ಏಕಸೇವಾ ದಂಡನಾಯಕ ವ್ಯವಸ್ಥೆ ಅನುಸರಿಸುತ್ತಿತ್ತು. ಭಾರತದಲ್ಲಿ 19 ಸೇನಾ ವಿಭಾಗಗಳಿವೆ.ಈ ಪ್ರತಿಯೊಂದು ಸೇನಾ ವಿಭಾಗಗಳೂ ಪ್ರತ್ಯೇಕ ವಿಧಾನದಲ್ಲಿ ಆಯಾ ಮುಖ್ಯಸ್ಥರಿಗೆ ವರದಿ ಮಾಡಿಕೊಳ್ಳುತ್ತವೆ. ಇವರ ಮಧ್ಯೆ ಸಮನ್ವಯತೆಯ ಕೊರತೆಯಿದೆ ಎನ್ನುವುದು ಸದ್ಯದ ಆರೋಪ. ಎಲ್ಲಾ ಮೂರೂ ಪಡೆಗಳಿಗೆ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಸೇನಾ ವಿಭಾಗಗಳಿವೆ.

ಒಂದೇ ಹೆಸರು, ಒಂದೇ ಪ್ರದೇಶ, ಪ್ರತ್ಯೇಕ ಕೇಂದ್ರ ಕಚೇರಿ ಮತ್ತು ವಿಭಿನ್ನ ತಂತ್ರಗಾರಿಕೆ. ಇದು ಯುದ್ಧ ಅಥವಾ ಸಂಘರ್ಷದ ಸಂದರ್ಭ ತಡೆರಹಿತ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ ಎನ್ನುವ ಆಕ್ಷೇಪಗಳೂ ಇವೆ. ಕಾರ್ಗಿಲ್ ಸಂಘರ್ಷದ ತರುವಾಯ ಏಕ ದಂಡನಾಯಕ ಹುದ್ದೆ ರೂಪಿಸುವ ಬಗ್ಗೆ ಶಿಫಾರಸು ಮಾಡಲಾಗಿತ್ತು. ಕಾರ್ಗಿಲ್ ಸಂಘರ್ಷಕ್ಕೆ ಕಾರಣವಾದ ಭದ್ರತಾ ಲೋಪದ ಬಗ್ಗೆ ಪರಿಶೀಲಿಸಲು ಕೆ. ಸುಬ್ರಹ್ಮಣ್ಯ ನೇತೃತ್ವದ ಕಾರ್ಗಿಲ್ ಪರಿಶೀಲನಾ ಸಮಿತಿ(ಕೆಆರ್‌ಎಸ್)ಯನ್ನು 1999ರಲ್ಲಿ ನೇಮಿಸಲಾಯಿತು. ರಕ್ಷಣಾ ಪಡೆಗಳಿಗೆ ಏಕೀಕೃತ ವ್ಯವಸ್ಥೆಯ ಅಗತ್ಯವನ್ನು ಕೆಆರ್‌ಎಸ್ ಪ್ರತಿಪಾದಿಸಿತು. ಕೆಆರ್‌ಎಸ್ ವರದಿಯನ್ನು ಅಧ್ಯಯನ ನಡೆಸಲು ರಚಿಸಲಾದ ಸಚಿವರ ತಂಡವೂ ಏಕದಂಡನಾಯಕ(ಸಿಡಿಎಸ್) ಹುದ್ದೆಗೆ ಶಿಫಾರಸು ಮಾಡಿತು. ಆದರೆ ಮೂರು ಪಡೆಗಳು ಈ ಸಲಹೆಗೆ ಒಪ್ಪಲಿಲ್ಲ ಎನ್ನುವುದು ಬಹುಮುಖ್ಯ ಅಂಶ. ವಿಶ್ವದಲ್ಲಿ ನಾಲ್ಕನೇ ಬೃಹತ್ ರಕ್ಷಣಾ ಬಜೆಟ್ ಹೊಂದಿರುವ ರಾಷ್ಟ್ರವಾಗಿರುವ ಭಾರತದಲ್ಲಿ ರಕ್ಷಣಾ ಪಡೆಗಳಿಗೆ ಮೀಸಲಾಗಿರುವ ನಿಧಿಯ ಹೆಚ್ಚಿನ ಪಾಲು ಸೈನಿಕರ ವೇತನ, ನಿವೃತ್ತ ಸೈನಿಕರ ಪಿಂಚಣಿ ಹಾಗೂ ಮೂಲಸೌಕರ್ಯ ವ್ಯವಸ್ಥೆಗೊಳಿಸಲು ಖರ್ಚಾಗುತ್ತಿದೆ.

ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಕಿಂಚಿತ್ ಹಣ ಉಳಿಯುತ್ತಿದ್ದು, ಆಧುನಿಕ ಯುದ್ಧತಂತ್ರಕ್ಕೆ ಹೋಲಿಸಿದರೆ ಭಾರತದ ರಕ್ಷಣಾ ಬಜೆಟ್‌ನಲ್ಲಿ ಸೇನಾಪಡೆಗಳ ಆಧುನೀಕರಣಕ್ಕೆ ಒದಗಿಸುವ ಮೊತ್ತ ಏನೇನೂ ಸಾಲದು. ರಕ್ಷಣಾ ಪಡೆಗಳಲ್ಲಿ ಮೂಲ ಭೂತ ಸುಧಾರಣೆಯ ಕೊರತೆಯಿದ್ದು, ಇದರತ್ತ ಗಮನ ಹರಿಸದೆ ಸಿಡಿಎಸ್ ಹುದ್ದೆ ಸೃಷ್ಟಿಸಿರುವುದು ನಿರರ್ಥಕ ಕ್ರಮ ಎನ್ನುವುದು ಕೆಲವರ ವಾದ. ಅಮೆರಿಕ ಅಥವಾ ಚೀನಾವನ್ನು ಅನುಸರಿಸುವುದಕ್ಕೆ ಮೊದಲು ನಮ್ಮ ಸೇನೆಯನ್ನು ಅತ್ಯಾಧುನಿಕಗೊಳಿಸುವುದರ ಕಡೆಗೆ ನಾವು ಗಮನ ನೀಡಬೇಕಾಗಿದೆ. ದುರಂತವೆಂದರೆ ಸೇನೆಯಲ್ಲಿ ಅತ್ಯಾಧುನಿಕತೆ ಪಕ್ಕಕ್ಕಿರಲಿ, ಅದು ಮೂಲಭೂತ ಅವಶ್ಯಕತೆಗಾಗಿ ಕಾಡಿ ಬೇಡಿಕೊಳ್ಳಬೇಕಾದ ಸನ್ನಿವೇಶದಲ್ಲಿದೆ. ಇಷ್ಟಾದರೂ ಸೈನಿಕರ ಕಾರ್ಯಕ್ಷಮತೆ ನಾವು ಹೆಮ್ಮೆ ಪಡುವಂತೆಯೇ ಇದೆ.

ಏಕ ಸೇನಾಧಿಕಾರಿಯ ತುರ್ತು ಅವಶ್ಯಕತೆ ನಿಜಕ್ಕೂ ಯಾರದ್ದು? ಎನ್ನುವ ಪ್ರಶ್ನೆಯೂ ನಮ್ಮ ಮುಂದಿದೆ. ಅಥವಾ ಸೇನೆಯ ಮೇಲೆ ಹಸ್ತಕ್ಷೇಪ ನಡೆಸುವುದಕ್ಕೆ ಇದು ದುರ್ಬಳಕೆಯಾಗುವ ಅಪಾಯವಿಲ್ಲವೇ? ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸೇನೆ ಅತ್ಯಂತ ಸೂಕ್ಷ್ಮ ವ್ಯವಸ್ಥೆ. ಅದು ಪ್ರಜಾಸತ್ತೆಗೆ ಪೂರಕವಾಗಿ ಕೆಲಸ ಮಾಡಬೇಕೇ ಹೊರತು, ಸೇನೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ಸವಾರಿ ಮಾಡುವಂತಿರಬಾರದು. ಹಾಗಾದಲ್ಲಿ ದೇಶದ ಸ್ಥಿತಿ ಏನಾಗಬಹುದು ಎನ್ನುವುದಕ್ಕೆ ಪಾಕಿಸ್ತಾನ ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದಿದೆ. ಸುಧಾರಣೆಯ ಹೆಸರಲ್ಲಿ, ಸೇನಾ ವಲಯದೊಳಗೆ ಗೊಂದಲ, ಅಸಮಾಧಾನಗಳನ್ನು ಬಿತ್ತುವ ಕೆಲಸವೂ ನಡೆಯಬಾರದು. ಈ ನಿಟ್ಟಿನಲ್ಲಿ, ಸಿಡಿಎಸ್ ಹುದ್ದೆಯ ಕಾರ್ಯವೈಖರಿ ಇನ್ನಷ್ಟು ಸ್ಪಷ್ಟಗೊಳ್ಳುವುದು ದೇಶದ ಪ್ರಜಾಸತ್ತೆಯ ಹಿತಾಸಕ್ತಿಯ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News