ಆಂಧ್ರಪ್ರದೇಶದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿದ ಡ್ರೋನ್ ಕ್ಯಾಮರಾ !

Update: 2019-08-17 14:54 GMT

ಅಮರಾವತಿ, ಆ.17: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮನೆಯ ಸುತ್ತ ಡ್ರೋನ್ ಕ್ಯಾಮರಾ ಬಳಸಿರುವುದು ಈಗ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಅಮರಾವತಿಯಲ್ಲಿರುವ ನಾಯ್ಡು ನಿವಾಸದ ಸುತ್ತ ಡ್ರೋನ್ ಕ್ಯಾಮರದ ಕಣ್ಣಾವಲು ವ್ಯವಸ್ಥೆ ಮಾಡುವ ಮೂಲಕ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿಯ ಮನೆಯ ಮೇಲೆ ನಿಗಾ ಇರಿಸಿದೆ ಎಂದು ಟಿಡಿಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಸರಕಾರ, ಈ ಪ್ರದೇಶದಲ್ಲಿ ನೆರೆ ಪರಿಸ್ಥಿತಿಯನ್ನು ಅವಲೋಕಿಸಲು ಡ್ರೋನ್ ಕ್ಯಾಮರ ಬಳಸಲಾಗಿದೆ ಎಂದು ಹೇಳಿದೆ. ಮನೆಯ ಸುತ್ತ ಡ್ರೋನ್ ಕ್ಯಾಮರದಿಂದ ಕಣ್ಗಾವಲು ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಟಿಡಿಪಿ ಕಾರ್ಯಕರ್ತರು ಹೇಳಿದ್ದು ಕಣ್ಗಾವಲನ್ನು ವಿರೋಧಿಸಿ ಟಿಡಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

 ಝಡ್ ಪ್ಲಸ್ ಭದ್ರತೆ ಶ್ರೇಣಿಯಲ್ಲಿರುವ ರಾಜಕಾರಣಿಯ ಮನೆಯ ಬಳಿ ಡ್ರೋನ್ ಬಳಸಿ ಚಿತ್ರೀಕರಣ ನಡೆಸಲು ಅನುಮತಿ ನೀಡಿದವರು ಯಾರು ಎಂದು ನಾಯ್ಡು ಪುತ್ರ ನಾರಾ ಲೋಕೇಶ್ ಪ್ರಶ್ನಿಸಿದ್ದಾರೆ. ಉಂಡವಳ್ಳಿಯಲ್ಲಿ ಕೃಷ್ಣಾ ನದಿ ತೀರದಲ್ಲಿರುವ ಮನೆಯಲ್ಲಿ 2016ರಿಂದ ನಾಯ್ಡು ಬಾಡಿಗೆಗಿದ್ದು ಮನೆಯ ವೈಮಾನಿಕ ಛಾಯಾಚಿತ್ರ ಮತ್ತು ವೀಡಿಯೊ ದೃಶ್ಯ ಎರಡು ದಿನದ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು. ಈ ಮನೆ ನೆರೆಯ ಅಪಾಯದಲ್ಲಿದೆ ಎಂದು ವರದಿಯಾಗಿತ್ತು. ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿರುವ ನಾಯ್ಡು ಈ ಬಗ್ಗೆ ತೀವ್ರ ಆಕ್ಷೇಪ ಸೂಚಿಸಿದ್ದು, ಡ್ರೋನ್ ಬಳಕೆಯಿಂದ ತನ್ನ ಭದ್ರತಾ ವ್ಯವಸ್ಥೆಯಲ್ಲಿ ಭಂಗವಾಗಿದೆ ಎಂದು ಡಿಜಿಪಿಗೆ ದೂರು ನೀಡಿದ್ದರು.

ಆದರೆ, ನೆರೆ ಪರಿಸ್ಥಿತಿ ಅವಲೋಕಿಸಲು ಡ್ರೋನ್ ಬಳಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಸ್ಪಷ್ಟೀಕರಣ ನೀಡಿದೆ. ನೆರೆ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಲು ಸರಕಾರಕ್ಕೆ ಅಧಿಕಾರವಿದೆ. ಕೃಷ್ಣಾ ನದಿ ತೀರ ಮಾತ್ರವಲ್ಲ, ನೆರೆ ಬಾಧಿತ ಎಲ್ಲಾ ಪ್ರದೇಶಗಳಲ್ಲೂ ಸರಕಾರ ಸಮೀಕ್ಷೆ ನಡೆಸುತ್ತದೆ. ನಾಯ್ಡು ಅವರ ಮನೆ ನೆರೆಬಾಧಿತ ಪ್ರದೇಶದಲ್ಲಿರುವುದು ಈ ಗೊಂದಲಕ್ಕೆ ಕಾರಣ ಎಂದು ಆಂಧ್ರಪ್ರದೇಶದ ನೀರಾವರಿ ಸಚಿವ ಅನಿಲ್ ಕುಮಾರ್ ಹೇಳಿದ್ದಾರೆ.

ಸರಕಾರದ ಹೇಳಿಕೆ ಸತ್ಯಕ್ಕೆ ದೂರವಾದುದು. ನದಿ ತೀರದಿಂದ ಮನೆ ತುಂಬಾ ದೂರದಲ್ಲಿದ್ದು ನೆರೆನೀರು ಮನೆಯ ಸನಿಹಕ್ಕೆ ಬಂದಿಲ್ಲ ಎಂದು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ನದಿಯ ಅಣೆಕಟ್ಟೆಯ ಗೇಟಿಗೆ ಬೋಟೊಂದು ಅಡ್ಡವಿರುವ ಫೋಟೋ ಅಪ್‌ಲೋಡ್ ಮಾಡಿರುವ ಅವರು, ಉದ್ದೇಶಪೂರ್ವಕವಾಗಿ ಈ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟುಮಾಡಲು ಪ್ರಯತ್ನಿಸಲಾಗಿದೆ. 2009ರಲ್ಲಿ ಕೃಷ್ಣಾ ನದಿಯಲ್ಲಿ ಇದಕ್ಕಿಂತ ಹೆಚ್ಚು ಪ್ರವಾಹದ ಪರಿಸ್ಥಿತಿಯಿತ್ತು. ಆಗಲೂ ಮನೆಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News