ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಿ: ಜಾವೀದ್ ಅಖ್ತರ್ ಸೂಚನೆ

Update: 2019-08-17 16:05 GMT

ಯಾದಗಿರಿ, ಆ.17: ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ನೀರು ಬಿಟ್ಟಿರುವುದರಿಂದ ಜಿಲ್ಲೆಯ ನದಿಪಾತ್ರದ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೀದ್ ಅಖ್ತರ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಮಾತನಾಡಿದ ಅವರು, ಪ್ರವಾಹದಿಂದಾಗಿ ನದಿಪಾತ್ರದ ಗ್ರಾಮಗಳಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಹಾಗಾಗಿ, ಅಗತ್ಯ ಔಷಧಗಳನ್ನು ಸಂಗ್ರಹಿಸಿ, ಜನರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಪ್ರವಾಹ ಕಡಿಮೆಯಾದ ನಂತರ ಹಳ್ಳಿಗಳಿಗೆ ಭೇಟಿ ನೀಡಿ ಆರೋಗ್ಯ ಶಿಬಿರ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸ್ವಚ್ಛತೆಗೆ ಕ್ರಮ ವಹಿಸಬೇಕು. ಕುಡಿಯುವ ನೀರು ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರವಾಹ ತಗ್ಗಿದ ನಂತರ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಬೇಕು. ಪ್ರವಾಹದಲ್ಲಿ ಮನೆಗಳ ಹಾನಿಯಾದ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಬೇಕು. ಮನೆಗಳ ಹಾನಿ ಸರ್ವೆಯಲ್ಲಿ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರವಾಹದಿಂದಾಗಿ ಹಲವು ಸೇತುವೆಗಳು ಮುಳುಗಡೆಯಾಗಿವೆ. ನೀರಿನ ಹರಿವು ಕಡಿಮೆಯಾದ ನಂತರ ಸೇತುವೆಗಳ ಸ್ಥಿತಿಗತಿ ಕುರಿತು ತಿಳಿದುಬರಲಿದೆ. ಪ್ರವಾಹದಿಂದ ಎನ್‌ಡಿಆರ್‌ಎಫ್ ಮತ್ತು ಎನ್‌ಸಿಆರ್‌ಎಫ್ ನಿಯಮಗಳ ಪ್ರಕಾರ ಜಿಲ್ಲೆಯಲ್ಲಿ 26.16 ಕೋಟಿ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News