ಬಾಗಲಕೋಟೆ: ಪ್ರವಾಹ ಇಳಿಕೆ, ರಸ್ತೆಗಳು ಸಂಚಾರಕ್ಕೆ ಮುಕ್ತ

Update: 2019-08-17 16:06 GMT

ಬಾಗಲಕೋಟೆ, ಆ.17: ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಪ್ರವಾಹದ ಮಟ್ಟ ಇಳಿಯುತ್ತಿದ್ದಂತೆಯೇ ಜಿಲ್ಲೆಯ ಪ್ರಮುಖ ರಸ್ತೆಗಳು ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಮಲಪ್ರಭಾ ನೆರೆಯಿಂದ ಕುಸಿದಿದ್ದ ಗೋವಿನಕೊಪ್ಪ ಕೊಣ್ಣೂರು ನಡುವಿನ ಮಲಪ್ರಭಾ ಸೇತುವೆಯು ತಾತ್ಕಾಲಿಕವಾಗಿ ದುರಸ್ತಿಯಾಗಿದೆ. ಬಾಗಲಕೋಟೆಯಿಂದ ಹುಬ್ಬಳ್ಳಿ-ಧಾರವಾಡಕ್ಕೆ ವಾಹನ ಸಂಚಾರ ಆರಂಭಗೊಂಡಿದೆ.

ಮಲಪ್ರಭಾ ಸೇತುವೆ ಹುಬ್ಬಳ್ಳಿ-ಧಾರವಾಡಕ್ಕಷ್ಟೇ ಅಲ್ಲದೆ ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರ್ಗಿ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರಕ್ಕೂ ಸಂಪರ್ಕ ಸೇತುವೆಯಾಗಿದೆ. ಅಧಿಕ ನೀರು ಹರಿದ ಪರಿಣಾಮ ಕಳೆದೊಂದು ವಾರದಿಂದ ಸಂಚಾರ ಸ್ಥಗಿತಗೊಂಡಿತ್ತು.

ಭಾರೀ ವಾಹನಗಳಿಗೆ ಅವಕಾಶವಿಲ್ಲ: ಲೋಕಾಪುರ, ಮುಧೋಳ ನಡುವೆ ಸಂಪರ್ಕ ಕಲ್ಪಿಸುವ ಚಿಚಖಂಡಿ ಬಳಿಯ ಘಟಪ್ರಭಾ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಇಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಲೋಕೋಪಯೋಗಿ ಇಲಾಖೆ ಅನುಮತಿ ನಿರಾಕರಿಸಿದೆ. ಹೀಗಾಗಿ, ಕಾರು, ಬೈಕ್‌ಗಳು ಸಂಚಾರ ಮಾಡುತ್ತಿವೆ ಎಂದು ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ ಹೇಳಿದ್ದಾರೆ.

ಚಿಕ್ಕಪಡಸಲಗಿ ಬಳಿ ಸೇತುವೆ ಮೇಲೆ ಕೃಷ್ಣಾ ನದಿ ಪ್ರವಾಹ ಹರಿಯುತ್ತಿರುವ ಕಾರಣ ಧಾರವಾಡ, ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಇನ್ನೂ ಆರಂಭವಾಗಿಲ್ಲ. ಗಣಿ ಸೇತುವೆಯ ಪರಿಸ್ಥಿತಿಯೂ ಹೀಗೆ ಇದ್ದು, ಬೀಳಗಿಯಿಂದ ಜಮಖಂಡಿಗೆ ಹೋಗುವ ವಾಹನಗಳು ಗಣಿ ಕ್ರಾಸ್, ಅಮಲಝರಿ ಮೂಲಕ ಹೋಗುತ್ತಿವೆ.

ಕಲಾದಗಿ, ಕಾತರಕಿ ನಡುವಿನ ನಿಂಗಾಪುರ ಸೇತುವೆ ಮೇಲೆ ಘಟಪ್ರಭೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಇನ್ನೂ 15 ದಿನ ಸಾಧ್ಯವಿಲ್ಲ ಎನ್ನಲಾಗಿದೆ. ಹಾರೋಗೇರಿ-ಅಥಣಿ ನಡುವಿನ ಕರೂರು ಬ್ರಿಜ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News