ಜನತೆ ಸಂಕಷ್ಟದಲ್ಲಿದ್ದಾಗ ಕೇಂದ್ರ, ರಾಜ್ಯ ಸರಕಾರಗಳು ನೆರವಿಗೆ ನಿಲ್ಲಬೇಕು: ದಿನೇಶ್ ಗುಂಡುರಾವ್

Update: 2019-08-17 17:26 GMT

ಮೂಡಿಗೆರೆ, ಆ.17: ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ ಜನ ತೀರ ಸಂಕಷ್ಟ ಎದುರಿಸುತ್ತಿದ್ದರೂ ರಾಜ್ಯದಲ್ಲಿ ಬಿಜೆಪಿ ಸರಕಾರದ ಜೊತೆಗೆ 25 ಸಂಸದರು, ಕೇಂದ್ರ ಸಚಿವರಿದ್ದರೂ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಪರಿಹಾರದ ಹಣ ತರುವಲ್ಲಿ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅಸಮಧಾನ ವ್ಯಕ್ತಪಡಿಸಿದರು.

ಅವರು ಶನಿವಾರ ತಾಲೂಕಿನ ಕಸ್ಕೇಬೈಲ್ ಗ್ರಾಮದಲ್ಲಿ ಧ್ವಂಸಗೊಂಡಿರುವ 30 ಎಕರೆ ಕಾಫಿ ತೋಡದ ಸ್ಥಿತಿಯನ್ನು ವೀಕ್ಷಿಸಿ ಬಳಿಕ ಗೊಣಿಬೀಡು ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಅವರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ 20 ಜಿಲ್ಲೆಯಲ್ಲಿ ಪ್ರವಾಹದಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. 600 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ರಾಜ್ಯ ಸರಕಾರದಲ್ಲಿ ಅಷ್ಟೊಂದು ಹಣ ಒದಗಿಸಲು ಶಕ್ತಿಯಿಲ್ಲ. ಕೇಂದ್ರ ಸರಕಾರದ ಬಳಿ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರಕ್ಕಾಗಿ ಪದೇ ಪದೇ ಬೇಡಿಕೊಂಡರೂ ನಯಾ ಪೈಸೆ ಕೊಡುತ್ತಿಲ್ಲ. ಜನತೆ ಸಂಕಷ್ಟದಲ್ಲಿರುವಾಗ ರಾಜಕೀಯ ಮಾಡದೇ ಪರಿಹಾರ ಒದಗಿಸಿ ಸಂತ್ರಸ್ತ ಜನರ ರಕ್ಷಣೆಗೆ ಧಾವಿಸಬೇಕಾಗಿರುವುದು ಕೇಂದ್ರ ಹಾಗೂ ರಾಜ್ಯ ಸರಕಾರದ ಹೊಣೆಯಾಗಿದೆ ಎಂದು ಹೇಳಿದರು.

ರಾಜ್ಯ ಸರಕಾರಲ್ಲಿ ಸಚಿವರೇ ಇಲ್ಲದೇ ಎಲ್ಲಾ ಇಲಾಖೆಗಳು ಅನಾಥವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಕೆಲ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಏಕಾಂಗಿ ಸರಕಾರದಿಂದ ಜನರನ್ನು ರಕ್ಷಸುವುದು ಸಾಧ್ಯವೇ ಇಲ್ಲ. ಕೇಂದ್ರ ಸರಕಾರ ರಾಜ್ಯದ ಸ್ಥಿತಿ ಅರಿತು ಕೂಡಲೇ ಪರಿಹಾರ ಘೋಷಣೆ ಮಾಡಬೇಕು. ಜನರ ಕಷ್ಟವನ್ನು ಆಲಿಸದಿದ್ದರೆ ಮುಂದೆ ಜನ ದಂಗೇಳುವುದರಲ್ಲಿ ಸಂಶಯವಿಲ್ಲವೆಂದು ಎಚ್ಚರಿಸಿದರು. ನಂತರ ಬಿದರಹಳ್ಳಿ, ಬಣಕಲ್, ಬಾಳೂರು, ಜಾವಳಿ, ಕಳಸ ಸಹಿತ ಹಾನಿಗೊಂಡಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಾಜಿ ಸಚಿವೆ ಮೋಟಮ್ಮ, ಜಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಎಐಸಿಸಿ ಕಾರ್ಯದರ್ಶಿ ಸಂದೀಪ್, ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್.ಮೂರ್ತಿ, ಮಾಜಿ ಜಿ.ಪಂ. ಅಧ್ಯಕ್ಷ ಕೆ.ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ, ಎಂ.ಪಿ.ಮನು, ವಕ್ತಾರ ಎಂ.ಎಸ್.ಅನಂತ್, ಪ.ಪಂ. ಸದಸ್ಯ ಹೊಸಕರೆ ರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಗೌಡ, ಕೆ.ಆರ್.ಮಹೇಶ್, ವರದೇಗೌಡ, ಅಫ್ರೋಜ್, ಸುರೇಂದ್ರ ಕಸ್ಕೇಬೈಲ್, ಪ್ರಕಾಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News