ಮಡಿಕೇರಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಎಸ್‍ವೈಎಸ್ ನಾಯಕರು ಭೇಟಿ

Update: 2019-08-17 18:04 GMT

ಮಡಿಕೇರಿ, ಆ.17: ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಕಾವೇರಿ ಪ್ರವಾಹದಿಂದ ನದಿ ದಡ ನಿವಾಸಿಗಳು ಮನೆ ಹಾಗೂ ಆಸ್ತಿ ಪಾಸ್ತಿ ಕಳೆದುಕೊಂಡಿರುವ ಬಡ ಕುಟುಂಬಗಳ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಸಂಘಟನೆ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಎಸ್.ವೈ.ಎಸ್  ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ತಿಳಿಸಿದರು. 

ಪ್ರವಾಹ ಪೀಡಿತ ಪ್ರದೇಶ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಟ್ಟದಕಾಡು, ಬರಡಿ, ಕುಂಬಾರಗುಂಡಿ, ಗುಹ್ಯ, ಕೂಡುಗದ್ದೆ, ಕರಡಿಗೋಡು, ಕೊಂಡಗೇರಿ ಭಾಗದ ಕಾವೇರಿ ನದಿ ಪ್ರವಾಹ ಪೀಡಿತ ಪ್ರದೇಶ ಹಾಗೂ ನೆಲ್ಲಿಹುದಿಕೇರಿಯ ಮುತ್ತಪ್ಪ ದೇವಸ್ಥಾನ, ಮದರಸ, ಶಾದಿ ಮಹಲ್ ಹಾಗೂ ಶಾಲೆಗಳಲ್ಲಿ ನೆಲೆಸಿರುವ ಸಂತ್ರಸ್ತರನ್ನು ಭೇಟಿ ಮಾಡಲಾಗಿದೆ. ನದಿ ದಡದಲ್ಲಿ ಎಲ್ಲಾ ಜನಾಂಗದವರು ವಾಸವಾಗಿದ್ದು, ಪ್ರವಾಹ ಸಂದರ್ಭದಲ್ಲಿ ಜಾತಿ ಮತ ಬೇಧವಿಲ್ಲದೆ ಎಲ್ಲರೂ ಒಗ್ಗೂಡಿ ಅವರನ್ನು ರಕ್ಷಣೆ ಮಾಡುವ ಮೂಲಕ ಪರಿಹಾರ ಕೇಂದ್ರಗಳಲ್ಲಿ ಇರಿಸಿ ತುರ್ತು ವ್ಯವಸ್ಥೆಗಳನ್ನು ಕೈಗೊಂಡಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.

ರಾಜ್ಯ ಹಾಗೂ ಜಿಲ್ಲೆಯಲ್ಲಿ ಎಸ್‍ವೈಎಸ್ ಹಾಗೂ ಎಸ್‍ಎಸ್‍ಎಫ್ ಕಾರ್ಯಕರ್ತರು ಪ್ರವಾಹದ ನಂತರವೂ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಸಂತ್ರಸ್ತರಿಗೆ ಶಾಶ್ವತ ಸೂರು ಹಾಗೂ ಪರಿಹಾರ ನೀಡುವ ವಿಶ್ವಾಸ ಇದೆ. ದಾನಿಗಳು ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ಕೈಜೋಡಿಸಬೇಕೆಂದರು.

ಈ ಸಂದರ್ಭ ರಾಜ್ಯ ಸಮಿತಿಯ ಪ್ರಮುಖರಾದ ಹಂಝ ಸಖಾಫಿ, ಅಹ್ಮದ್ ಸಖಾಫಿ, ದಕ್ಷಿಣ ಕನ್ನಡ ಜಿಲ್ಲಾ ಎಸ್.ವೈ.ಎಸ್ ಅಧ್ಯಕ್ಷ ಅಶ್ರಫ್ ಕಿನಾರ, ಜಿಲ್ಲಾ ಎಸ್ವೈಎಸ್ ಅಧ್ಯಕ್ಷ ಹಫೀಳ್ ಸಹದಿ, ಪ್ರಮುಖರಾದ ಕೆ.ಎಂ ಸಯ್ಯದ್ ಭಾವ, ಉಸ್ಮಾನ್ ಸುಂಟಿಕೊಪ್ಪ, ಅಬ್ದುಲ್ಲಾ, ಹಂಝಾ, ಶಿಹಾಬುದ್ದೀನ್ ಸೇರಿದಂತೆ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News