ಎಸ್ಕೆಎಸ್ಸೆಸ್ಸೆಫ್ ನಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ: ಸಂತ್ರಸ್ತರಿಗೆ ಪರಿಹಾರ ವಿತರಣೆ

Update: 2019-08-17 18:10 GMT

ಸಿದ್ದಾಪುರ, ಆ.17: ಜಿಲ್ಲೆಯಲ್ಲಿ ಸುರಿದ ಮಹಾಮಳೆ ಹಾಗೂ ಪ್ರವಾಹದಿಂದ ಹಲವು ಗ್ರಾಮಗಳು ಜಲಾವೃತಗೊಂಡು ಮನೆ, ಆಸ್ತಿ ಪಾಸ್ತಿ ಕಳೆದುಕೊಂಡು ಸಂತ್ರಸ್ತರಾಗಿ ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವ ಕುಟುಂಬಗಳಿಗೆ ಬೇಕಾದ ಅಗತ್ಯ ದಿನಬಳಕೆಯ ವಸ್ತುಗಳನ್ನು ನೀಡಲಾಗಿದ್ದು, ಎಸ್ಕೆಎಸ್ಸೆಸ್ಸೆಫ್ ಸಂಘಟನೆಯು ಸಂತ್ರಸ್ತರ ಸೇವೆಗೆ ಸದಾ ಕೈ ಜೋಡಿಸಲಿದೆ ಎಂದು ಸಂಘಟನೆಯ ಸಂಚಾಲಕ ಸುಂಟಿಕೊಪ್ಪದ ಸಿ.ಎಂ ಹಮೀದ್ ಮೌಲವಿ ತಿಳಿಸಿದ್ದಾರೆ.

ನೆಲ್ಲಿಹುದಿಕೇರಿ ಮುತ್ತಪ್ಪ ದೇವಸ್ಥಾನ ಸಭಾಂಗಣದಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಬ್ಯಾಗ್ ಗಳನ್ನು ವಿತರಣೆ ನಂತರ ಮಾತನಾಡಿದ ಅವರು, ಶಾಂತಿ ಸಹಬಾಳ್ವೆ ಸಹೋದರತ್ವ ಸಾರುವ ಸಂಘಟನೆಯು, ಸಮಾಜದಲ್ಲಿ ಬದುಕುತ್ತಿರುವ ಎಲ್ಲ ವರ್ಗವನ್ನು ಸಮಾನವಾಗಿ ಕಾಣುವ ಮೂಲಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಮುಂದಾಗಿದೆ. ಜಿಲ್ಲೆಯಲ್ಲಿ ಮಹಾಮಳೆ ಹಾಗೂ ಪ್ರಕೃತಿ ದುರಂತ ಸ್ಥಳಗಳಿಗೆ ತಂಡ ಭೇಟಿ ನೀಡಿ ಸಂಕಷ್ಟದಲ್ಲಿರುವವರ ಸಮಸ್ಯೆಗಳನ್ನು ಆಲಿಸಿ ಜನರಿಗೆ ಬೇಕಾದ ಅಗತ್ಯ ದಿನ ಬಳಕೆಯ ವಸ್ತುಗಳನ್ನು ನೀಡಲಾಗಿದ್ದು, ಸಂತ್ರಸ್ತರ ಬದುಕಿನ ಪುನರ್ ನಿರ್ಮಾಣಕ್ಕೆ ಸದಾ ಕೈಜೋಡಿಸುವುದಾಗಿ ತಿಳಿಸಿದರು.

ಸಮಸ್ತ ಕೇರಳ ಜಂಇಯತುಲ್ ಉಲಮಾ, ಎಸ್ವೈಎಸ್, ಸುಂಟಿಕೊಪ್ಪ ಖತೀಜಾ ಹುಮ್ಮಾ ಮದರಸಾ ಸಮಿತಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಮೂಲಕ ತುರ್ತು ಪರಿಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ ಜಿಲ್ಲಾ ನಾಯಿಬ್ ಖಾಜಿ ಎಂ.ಎಂ ಅಬ್ದುಲ್ಲ ಫೈಝಿ, ಸುಂಟಿಕೊಪ್ಪ ಜಮಾ ಮಸೀದಿ ಅಧ್ಯಕ್ಷ ಹಸನ್ ಕುಂಞಿ ಹಾಜಿ, ಎಸ್ವೈಎಸ್ ಜಿಲ್ಲಾ ಕಾರ್ಯದರ್ಶಿ ಉಮ್ಮರ್ ಫೈಝಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಆರಿಫ್ ಫೈಝಿ, ಸದಸ್ಯ ಇಕ್ಬಾಲ್ ಮೌಲವಿ, ಪ್ರಮುಖರಾದ ಸಫ್ವಾನ್ ಮುಹಮ್ಮದ್, ಅಬೂಬಕ್ಕರ್ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News