ಹೈಅಲರ್ಟ್ ಘೋಷಣೆ ಹಿನ್ನೆಲೆ: ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Update: 2019-08-17 18:13 GMT

ಮೈಸೂರು,ಆ.17: ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಡಿಸಿಪಿ ಮುತ್ತುರಾಜ್ ತಿಳಿಸಿದರು.

ಕಮೀಷನರ್ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಸ್ಥಳೀಯರು, ಇಂಟಲಿಜಿನ್ಸಿಯಿಂದ ಮಾಹಿತಿ ಸಿಕ್ಕಿದೆ. ಯಾರಾದರೂ ಕಿಡಿಗೇಡಿಗಳು ಕೃತ್ಯವೆಸಗಬಹುದೆಂದು ಮುಂಜಾಗ್ರಾತಾ ಕ್ರಮವಾಗಿ ಮೈಸೂರಿನಲ್ಲಿ ಭದ್ರತೆ ಒದಗಿಸಲಾಗಿದೆ. ನಿನ್ನೆ ರಾತ್ರಿಯಿಂದ 10 ಕಡೆ ಚೆಕ್ ಪೋಸ್ಟ್ ಮಾಡಿದ್ದೇವೆ. ಹೋಟೆಲ್, ಲಾಡ್ಜ್ ಎಲ್ಲವನ್ನು ತಪಾಸಣೆ ಮಾಡುತ್ತಿದ್ದೇವೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸೇರಿ ಮೂರು ತಂಡ ಮಾಡಿದ್ದೇವೆ. ಏರ್ ಪೋರ್ಟ್, ರೈಲ್ವೇ ನಿಲ್ದಾಣ, ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ, ಮಾಲ್, ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ರಾತ್ರಿಯಿಂದ ನಿರಂತರವಾಗಿ ತಪಾಸಣೆ ಮಾಡಲಾಗುತ್ತಿದೆ. ಎರಡು ಕಮಾಂಡೋ ತಂಡಗಳನ್ನು ನೇಮಕ ಮಾಡಲಾಗಿದೆ ಎಂದರು.

ದಸರಾ ಮಹೋತ್ಸವ ಆಗಮನ ಹಿನ್ನಲೆಯಲ್ಲಿ ಪ್ರತಿ ವಾರ ಹಗಲು ರಾತ್ರಿ ತಪಾಸಣೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಪ್ರತಿ ವಾರ ಎರಡು ದಿನ ತಪಾಸಣೆ ಮಾಡುವಂತೆ ಸೂಚನೆ ನೀಡಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅವರನ್ನು ತನಿಖೆಗೆ ಒಳಪಡಿಸುತ್ತೇವೆ. ಸಾರ್ವಜನಿಕರಿಗೆ ವ್ಯಕ್ತಿ, ವಸ್ತುಗಳ ಕುರಿತು ಅನುಮಾನ ಬಂದರೆ ದಯವಿಟ್ಟು 100 ಕ್ಕೆ ಕರೆ ಮಾಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಸಾರ್ವಜನಿಕರು ಯಾರೂ ಭಯಪಡುವ ಅವಶ್ಯಕತೆ ಇಲ್ಲ. ರಾತ್ರಿ ವೇಳೆ ಚಾಮುಂಡಿ ಬೆಟ್ಟದ ಗೇಟ್ ಮುಚ್ಚಲಾಗುತ್ತದೆ. ಬೆಟ್ಟದ ಸುತ್ತ ಮುತ್ತ 5 ಗೇಟ್ ಗಳಿವೆ. ನಾಲ್ಕು ಗೇಟ್ ಗಳನ್ನು 9 ಗಂಟೆಗೆ ಲಾಕ್ ಮಾಡಿರುತ್ತೇವೆ. ಒಂದು ಗೇಟ್ ನಲ್ಲಿ ಮಾತ್ರ ಪೊಲಿಸ್ ಸಿಬ್ಬಂದಿಗಳಿರುತ್ತಾರೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News