ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಿದ್ಧವಾಗುತ್ತಿದೆ 1 ಲಕ್ಷ ಚಪಾತಿ

Update: 2019-08-17 18:16 GMT

ಚಾಮರಾಜನಗರ, ಆ.17: ಹಿಂದೆಂದೂ ಕಂಡರಿಯದ ಜಲಪ್ರಳಯಕ್ಕೆ ತುತ್ತಾಗಿರುವ ಉತ್ತರ ಕರ್ನಾಟಕದ ಜನತೆಗೆ ರಾಜ್ಯಾದ್ಯಂತ ನೆರವಿನ ಮಹಾಪೂರವೇ ಹರಿದುಬರುತ್ತಿದ್ದು, ಚಾಮರಾಜನಗರ ಜನತೆ ಕೂಡಾ ನಿಮ್ಮೊಂದಿಗಿದ್ದೇವೆ ಎಂಬ ಅಭಿಯಾನದೊಂದಿಗೆ 1 ಲಕ್ಷ ಒಣ ಚಪಾತಿ ರವಾನಿಸಲು ತಯಾರಿ ನಡೆದಿದೆ.

ನಗರದ ಗಾನಕವಿ ಫೌಂಡೇಶನ್, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ವರ್ತಕರ ಸಂಘದ ಸಹಯೋಗದಲ್ಲಿ ನಗರದ ಶಂಕರಪುರ ಬಡಾವಣೆಯ ರಾಮಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಹಿಳೆಯರು ಒಣ ಚಪಾತಿ ತಯಾರಿಕೆಯಲ್ಲಿ ತೊಡಗಿದ್ದಾರೆ. 50ಕ್ಕೂ ಹೆಚ್ಚು ಮಂದಿ ಚಪಾತಿ ತಯಾರಿಸಲು ಭಾಗವಹಿಸಿದ್ದು, ಕೆಲವರು ಚಪಾತಿ ಹದ ಮಾಡಿಕೊಟ್ಟರೆ, ಎರಡು ಒಲೆಗಳಲ್ಲಿ ಚಪಾತಿಯನ್ನು ಬೇಯಿಸಿಕೊಡುವ ಕೆಲಸವನ್ನು ಮತ್ತೆ ಕೆಲವರು ಮಾಡುತ್ತಿದ್ದಾರೆ.

'ಮಂದಿರದ ಎರಡು ಕಡೆ ಬೇಯಿಸಿದ ಚಪಾತಿಯನ್ನು ಇಡಲಾಗುತ್ತಿದೆ. ಕವರ್ ನಲ್ಲಿ ಪ್ಯಾಕ್ ಮಾಡಿ ರವಾನಿಸಲು ಚಿಕ್ಕ ಚಿಕ್ಕ ಬಾಕ್ಸ್ ಗಳನ್ನು ಸಂಗ್ರಹಿಸಿಡಲಾಗಿದೆ. ಭಾನುವಾರದೊಳಗೆ 1 ಲಕ್ಷ ಚಪಾತಿಗಳನ್ನು ತಯಾರಿಸಿ ಸೋಮವಾರ ವರ್ತಕರ ಸಹಕಾರದೊಂದಿಗೆ ಉತ್ತರ ಕರ್ನಾಟಕಕ್ಕೆ ರವಾನಿಸಲಾಗುತ್ತದೆ' ಎನ್ನುತ್ತಾರೆ ಆಯೋಜಕರು.

ಗಾನಕವಿ ಫೌಂಡೇಷನ್ ಅಧ್ಯಕ್ಷ ವಿಶ್ವಕುಮಾರ್, ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ರವಿಶಂಕರ್, ಕಾರ್ಯದರ್ಶಿ ಕೆ.ಎಸ್.ಚಿದಾನಂದ ಗಣೇಶ್, ಪತಂಜಲಿ ಯೋಗ ಶಿಕ್ಷ ಣ ಸಮಿತಿಯ ಯೋಗ ನಿಜಗುಣ ಸ್ಥಳದಲ್ಲಿ ಹಾಜರಿದ್ದರು.

ಗಾನಕವಿ ಫೌಂಡೇಷನ್ , ಶ್ರೀ ಪತಂಜಲಿ ಯೋಗ ಶಿಕ್ಷ ಣ ಸಮಿತಿ, ವರ್ತಕರ ಸಂಘದ ಸಹಯೋಗದಲ್ಲಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಶಾಲಾ, ಕಾಲೇಜು ಹಾಗೂ ಸಾರ್ವಜನಿಕರ ನೆರವಿನಿಂದ 1 ಲಕ್ಷ ಒಣ ಚಪಾತಿಗಳನ್ನು ಸಂಗ್ರಹಿಸಿ ಸೋಮವಾರ ಉತ್ತರ ಕರ್ನಾಟಕದ ಜನತೆಗೆ ರವಾನಿಸಲಾಗುವುದು.

-ವಿಶ್ವಕುಮಾರ್, ಗಾನಕವಿ ಫೌಂಡೇಷನ್ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News