ದಿಢೀರ್ ಮಳೆಗೆ ದೇವನಗರಿ ಸಂಪೂರ್ಣ ಅಸ್ತವ್ಯಸ್ತ: ಸಂಚಾರಕ್ಕೆ ಅಡಚಣೆ

Update: 2019-08-18 15:03 GMT

ದಾವಣಗೆರೆ, ಆ.18: ಇಂದು ಸಂಜೆ 3 ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ದೇವನಗರಿ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ದಿಢೀರ್ ಮಳೆಯಿಂದ ಜನರು ಪರದಾಡಿದ ದೃಶ್ಯಗಳು ಕಂಡು ಬಂದವು. 

ಮಳೆಯಿಂದಾಗಿ ನಗರದ ಪಿ.ಬಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಜಲಾವೃತವಾಗಿ ನದಿಯಂತೆ ಹರಿದ ದೃಶ್ಯಗಳು ಕಂಡುಬಂತು. ಅಲ್ಲದೇ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸಂಪೂರ್ಣವಾಗಿ ಜಲಾವೃತವಾಗಿತ್ತು. ಇದರಿಂದಾಗಿ ಬಸ್‍ಗಳ ಅರ್ಧದಷ್ಟು ನೀರಿನಲ್ಲಿ ನಿಂತಿದ್ದವು. ಅಗ್ನಿಶಾಮಕ ದಳದ ಕಚೇರಿಗೂ ನೀರು ನುಗ್ಗಿತ್ತು. ಪಾಲಿಕೆ ಬಳಿಯ ಅಂಡರ್ ಬ್ರಿಡ್ಜ್, ರೇಣುಕಾಮಂದಿರದ ಬಳಿಯ ಅಂಡರ್ ಬ್ರಿಡ್ಜ್, ಶಿವಾಲಿ ಚಿತ್ರಮಂದಿರದ ಬಳಿ ಅಂಡರ್ ಬ್ರಿಡ್ಜ್ ಜಲಾವೃತವಾಗಿದ್ದರಿಂದ ಅಟೋಗಳು ಸೇರಿದಂತೆ ವಾಹನ ಸವಾರರು ಪರದಾಡಿದರು. ಈ ವೇಳೆ ಸಂಚಾರಕ್ಕೆ ಅಡಚಣೆಯಂಟಾಯಿತು. 

ಬೇತೂರು ರಸ್ತೆಯಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದ್ದರಿಂದ ಗೋಡೆ ಕುಸಿದು ಟಿವಿ, ಸಾಮಾನುಗಳು ಹಾಳಾಗಿವೆ. ವಿನೋಬನಗರ ರಸ್ತೆಗಳಲ್ಲ ಜಲಾವೃತವಾಗಿವೆ. ತಗ್ಗು ಪ್ರದೇಶಗಳಾದ ಗಾಂಧಿ ನಗರ, ಎಸ್‍ಪಿಎಸ್ ನಗರ, ಅಝಾದ್ ನಗರ, ಬಾಷ್ ನಗರ, ಅಹಮದ್ ನಗರ ,ಅಖ್ತಾರ ರಝಾಕ್ ಪ್ರದೇಶ, ಜಾಲಿನಗರ, ಶೇಖರಪ್ಪ ನಗರ, ನೀಲಮ್ಮನ ತೋಟ ಮತ್ತಿತರ ನಗರಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಈ ವೇಳೆ ಜನರು ಮನೆಯಿಂದ ನೀರು ಹೊರ ಹಾಕುತ್ತಿದ್ದರು. ಬಾಪೂಜಿ ಎಂಬಿಎ ಕಾಲೇಜ್ ಅವರಣಕ್ಕೂ ಸಹ ನೀರು ನುಗ್ಗಿದೆ. 

ಅಸ್ಪತ್ರೆಗೆ ನುಗ್ಗಿದ ನೀರು: ಚಾಮರಾಜ್‍ಪೇಟೆ ವೃತ್ತದಲ್ಲಿರುವ ಸರಕಾರಿ ಹಳೆಯ ಮಹಿಳಾ ಮತ್ತು ಮಕ್ಕಳ ಅಸ್ಪತ್ರೆಯಲ್ಲಿ ಮಳೆ ನೀರು ನುಗ್ಗಿದ್ದರಿಂದ ಗರ್ಭಿಣಿಯರು, ಬಾಣಂತಿಯರು ಪರದಾಡಿದರು. ಅಸ್ಪತ್ರೆಯ ಸಿಬ್ಬಂದಿಗಳು ನೀರು ಹೊರ ಹಾಕಲು ಹರಸಾಹಸ ಪಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News